ಕುಲಾಲ ಸಂಘ ಪಿಂಪ್ರಿ ಚಿಂಚ್ವಾಡ್ 8 ನೇ ವಾರ್ಷಿಕೋತ್ಸವ ಸಮಾರಂಭ

0
105

ಸಂಘದ ಸಾಮಾಜಿಕ ಕಾರ್ಯ ಶ್ಲಾಘನೀಯ -ನ್ಯಾಯವಾದಿ ಅಪ್ಪು ಮೂಲ್ಯ

ಪುಣೆ :(www.kiranvarta.com)ಕುಲಾಲ ಸಂಘ ಪಿಂಪ್ರಿ ಚಿಂಚ್ವಾಡ್ ಇದರ 8 ನೇ ವಾರ್ಷಿಕೋತ್ಸವ ಸಮಾರಂಭವು ಜ ೨೬ ರಂದು ಪಿಂಪ್ರಿ ನೆಹರೂನಗರದ ಮಧುಸೂದನ ಟೊಕ್ಲೆ ಸಭಾಭವನದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು . ಸಂಘದ ಸ್ಥಾಪಕಾಧ್ಯಕ್ಷ ನ್ಯಾಯವಾದಿ ಅಪ್ಪು ಮೂಲ್ಯ ದೀಪ ಪ್ರಜ್ವಲಿಸಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ ಪಿಂಪ್ರಿ ಚಿಂಚ್ವಾಡ್ ಪರಿಸರದಲ್ಲಿರುವ ಸಮಾಜಬಾಂಧವರೆಲ್ಲರನ್ನೂ ಒಂದೇ ಛತ್ರದಲ್ಲಿ ಒಗ್ಗೂಡಿಸುವ ಮೂಲಕ ನಮ್ಮ ತುಳುಭಾಷೆ ,ಸಾಂಸ್ಕೃತಿಕ ಪರಂಪರೆಗಳನ್ನು ಉಳಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವ ಸಂಘದ ಕಾರ್ಯವೈಖರಿ ಶ್ಲಾಘನೀಯವಾಗಿದೆ . ಸಂಘಕ್ಕೊಂದು ಸ್ವಂತ ಕಚೇರಿಯ ಆವಶ್ಯಕತೆಯಿದ್ದು ಆ ಬಗ್ಗೆ ಚಿಂತಿಸಿ ಆದಷ್ಟು ಬೇಗ ಕಾರ್ಯಪ್ರವೃತ್ತರಾಗಬೇಕಾಗಿದೆ . ಸಂಘದ ಪ್ರಗತಿಯಲ್ಲಿ ಇದೊಂದು ಸ್ಪೂರ್ತಿದಾಯಕ ಹೆಜ್ಜೆಯಾಗಲಿದ್ದು ಮುಂದೆ ಸಮಾಜದ ಒಗ್ಗಟ್ಟು ಹಾಗೂ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಸದಸ್ಯರೆಲ್ಲರೂ ಶ್ರಮಿಸಿ ಸಂಘವನ್ನು ಪ್ರಗತಿಪಥದಲ್ಲಿ ಕೊಂಡೊಯ್ಯಲು ನೆರವಾಗಬೇಕು . ನಮ್ಮ ಸಂಘವು ಇದೀಗ ನೋಂದಾಯಿತ ಸಂಸ್ಥೆಯಾಗಿದ್ದು ಮುಂಬಯಿ ,ಪುಣೆ ಸಂಘಗಳ ಸಹಕಾರದೊಂದಿಗೆ ಮುಂದಡಿಯಿಟ್ಟು ಇನ್ನೂ ಹೆಚ್ಚಿನ ಸಾಮಾಜಿಕ ,ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಮಾಜಬಾಂಧವರ ಆಶೋತ್ತರದಂತೆ ಕಾರ್ಯನಿರ್ವಹಿಸಬೇಕಾಗಿದೆ ಎಂದರು ,

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಪುಣೆ ತುಳುಕೂಟದ ಸ್ಥಾಪಕಾಧ್ಯಕ್ಷ ಜಯ ಕೆ ಶೆಟ್ಟಿ ಮಾತನಾಡಿ ಕುಲಾಲ ಸಮಾಜಬಾಂಧವರು ಒಗ್ಗಟ್ಟಿನೊಂದಿಗೆ ಬೆಸೆದುಕೊಂಡು ಸಂಘದ ಮೂಲಕ ಸಮಾಜಮುಖಿ ಚಿಂತನೆಗಳೊಂದಿಗೆ ಸಾಮಾಜಿಕ ,ಸಾಂಸ್ಕೃತಿಕ ಅಭ್ಯುದಯದ ಕಾರ್ಯವನ್ನು ಮಾಡುತ್ತಿರುವುದು ಅಭಿನಂದನೀಯವಾಗಿದೆ . ಸಂಘದೊಂದಿಗೆ ಪ್ರತಿಯೋರ್ವ ಸದಸ್ಯರೂ ಕೈಜೋಡಿಸಿ ಸಂಘಟನೆಯನ್ನು ಇನ್ನಷ್ಟು ಬಲಪಡಿಸಬೇಕಾಗಿದೆ .ಎಂದರು .
ಸಂಘದ ಅಧ್ಯಕ್ಷ ಸದಾನಂದ ಮೂಲ್ಯ ಮಾತನಾಡಿ ನಮ್ಮ ಸಂಘದ ೮ ನೇ ವಾರ್ಷಿಕೋತ್ಸವಕ್ಕೆ ಸಮಾಜಬಾಂಧವರೆಲ್ಲರೂ  ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕಾರ ನೀಡಿ ಸಂಘದ ಉತ್ಸಾಹವನ್ನು ಹೆಚ್ಚಿಸಿದ್ದಾರೆ . ಮುಂದಿನ ವರ್ಷಗಳಲ್ಲಿ ದೊಡ್ಡ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಆಯೋಜಿಸಬೇಕಾದ ಅಗತ್ಯತೆ ಇದೆ . ಮುಂದೆಯೂ ಸಮಾಜಬಾಂಧವರೆಲ್ಲರ ಸಹಕಾರ ,ಪ್ರೋತ್ಸಾಹ ಸಂಘದ ಮೇಲಿರಲಿ ಎಂದರು .
ಸಂಘದ ಪ್ರಧಾನ ಕಾರ್ಯದರ್ಶಿ ಜಯ ಮೂಲ್ಯ ಸಂಘದ ವಾರ್ಷಿಕ ಕಾರ್ಯಚಟುವಟಿಕೆಗಳ ವರದಿಯನ್ನು ವಾಚಿಸಿದರು . ಸಂಘದ ಕೋಶಾಧಿಕಾರಿ ವಾರ್ಷಿಕ ಲೆಕ್ಕಪತ್ರಗಳನ್ನು ಸಭೆಯ ಮುಂದಿಟ್ಟರು . ಸಂಘದ ಸದಸ್ಯರಾದ ಮೇಘನಾ ಮೂಲ್ಯ ಮಾತನಾಡಿ ಮಹಾರಾಷ್ಟ್ರದಲ್ಲಿ ಕುಲಾಲ ಸಮಾಜಕ್ಕೆ ಒಬಿ ಸಿ ಕೋಟಾದಡಿ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು . ಈ ಸಂದರ್ಭ ಸಂಘದ ಹಿರಿಯ ಸದಸ್ಯರಾದ ಜೆ ಟಿ ಬಂಗೇರ ದಂಪತಿಗಳನ್ನು ಗೌರವಿಸಲಾಯಿತು .
ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು . ಸಂಘದ ಸದಸ್ಯರು ಪ್ರಾರ್ಥಿಸಿದರು .ಉಪಾಧ್ಯಕ್ಷ ರವಿ ಮೂಲ್ಯ ಸ್ವಾಗತಿಸಿದರು . ಮನೋರಂಜನೆಯಂಗವಾಗಿ ಸಂಘದ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು .  ಭೋಜನದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು .

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ