ತುಳು ಸೇವಾ ಸಂಘ ನಾಸಿಕ್ 29 ನೇ ವಾರ್ಷಿಕ ಮಹಾಸಭೆ -ವಾರ್ಷಿಕೋತ್ಸವ

0
360
ತುಳುಭಾಷೆಯ ಉಳಿವಿಗೆ ಪ್ರಯತ್ನ ಅಗತ್ಯ -ಮೋಹನ್ ಶೆಟ್ಟಿ 
ನಾಸಿಕ್ :(www.kiranvarta.com)ನಾಸಿಕ್ ನಲ್ಲಿರುವ ತುಳುನಾಡ  ಬಂಧುಗಳು ತಮ್ಮ ತಮ್ಮ ಉದ್ಯೋಗ ವ್ಯವಹಾರಗಳೊಂದಿಗೆ ಸಂಘಟನಾತ್ಮಕವಾಗಿ ಗುರುತಿಸಿಕೊಂಡು ತುಳುನಾಡ ಭಾಷೆ ,ಸಂಸ್ಕೃತಿ ಸೇವೆಯೊಂದಿಗೆ ವಿವಿಧ ಸಾಮಾಜಿಕ ,ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ತೊಡಗಿಸಿಕೊಂಡು ತುಳುನಾಡ ತಾಯಿಯ ತೇರನ್ನೆಯೇಯುತ್ತಿರುವುದು ಅಭಿನಂದನೀಯವಾಗಿದೆ . ನಮ್ಮ ತುಳುನಾಡ ಸಾಂಸ್ಕೃತಿಕ ಪರಂಪರೆಗಳು ಮೌಲ್ಯಯುತವಾಗಿದ್ದು   ಇನ್ನೆಲ್ಲಿಯೂ ಇಂತಹ ಸಂಸ್ಕೃತಿಗಳನ್ನು ನಾವು ಕಾಣಲು ಸಾಧ್ಯವಿಲ್ಲ . ಆದುದರಿಂದ ನಮ್ಮ ಭಾಷೆಯನ್ನು  ಉಳಿಸುವ ಜವಾಬ್ದಾರಿ ನಮ್ಮ ಮೇಲಿದ್ದು ಇಂತಹ ಸಂಘ ಸಂಸ್ಥೆಗಳಿಂದ ತುಳುಭಾಷೆಗೆ ಆದ್ಯತೆ ನೀಡಿ ಉಳಿಸುವ ಪ್ರಯತ್ನ ನಡೆಯಬೇಕಾಗಿದೆ ಎಂದು ಪುಣೆ ತುಳುಕೂಟದ ಅಧ್ಯಕ್ಷ ಮೋಹನ್ ಶೆಟ್ಟಿ ಎಣ್ಣೆಹೊಳೆ ನುಡಿದರು .
    ಅವರು ಫೆ 16 ರಂದು ನಾಸಿಕ್ ನ ಶಾಲಿಮಾರ್ ನಲ್ಲಿರುವ ಪರಶುರಾಮ್ ಸಾಯಿ ಖೇಡ್ಕರ್ ಸಭಾಗಣದಲ್ಲಿ ನಡೆದ ತುಳುಸೇವಾ ಸಂಘ ನಾಸಿಕ್ ಇದರ ೨೯ ನೇ ವಾರ್ಷಿಕ ಮಾಹಾಸಭೆ ಹಾಗೂ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡುತ್ತಾ ಭವಿಷ್ಯದಲ್ಲಿ ನಮ್ಮ ಭಾಷೆಯ ಬೆಳವಣಿಗೆ ಹಾಗೂ ನಮ್ಮ ಆಚಾರವಿಚಾರಗಳು ನಮ್ಮ ಮಕ್ಕಳಿಗೂ ತಿಳಿಸುವಂತಾಗಲು ನಾವು ಪ್ರೆಅಯತ್ನಪಡಬೇಕಾಗಿದೆ . ಮಕ್ಕಳಿಗೆ ಬಾಲ್ಯದಲ್ಲಿ ಮನೆಯಲ್ಲಿ ತುಳು ಮಾತನಾಡುವ ಅಭ್ಯಾಸವನ್ನು ಮಾತನಾಡಬೇಕಾಗಿದೆ . ಮುಂದೆ ನಮ್ಮತನವೆಂಬುದು ಉಳಿಯುವಂತಾಗಲು ಭಾಷೆಯನ್ನೂ ಬೆಳೆಸುವ ಕಾರ್ಯ ಆಗಬೇಕಾಗಿದೆ. ತುಳುಸೇವಾ ಸಂಘದ ಕಾರ್ಯಕ್ರಮಗಳು ಅರ್ಥಪೂರ್ಣವಾಗಿದ್ದು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯವಾಗಿದೆ ಎಂದು ಭಾವಿಸುತ್ತೇನೆ . ಮುಂದಿನ ದಿನಗಳಲ್ಲಿ ಸಂಘವು ಇನ್ನಷ್ಟು ಉತ್ತಮ ಸಮಾಜಮುಖಿ ಕಾರ್ಯಗಳ ಮೂಲಕ ಸಾರ್ಥಕ ಸೇವೆಯನ್ನು ಮಾಡುವಂತಾಗಲಿ ಎಂದರು .
   ಸಂಘದ ಅಧ್ಯಕ್ಷ ಎಡ್ಮೇರ್ ಭಾಸ್ಕರ ಶೆಟ್ಟಿಯವರು  ಅಧ್ಯಕ್ಷ ಸ್ಥಾನದಿಂದ ಮಾತನ್ನಾಡುತ್ತಾ  ಇಂದು ನಮ್ಮ ಸಂಘ ೨೯ ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮವನ್ನು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಆಚರಿಸುತ್ತಿರುವುದಕ್ಕೆ ಅತೀವ ಆನಂದವಾಗುತ್ತಿದೆ . ೨೯ ವರ್ಷಗಳ ಹಿಂದೆ ನಾಸಿಕ್ ನಲ್ಲಿರುವ ತುಳುನಾಡ ಬಾಂಧವರೆಲ್ಲ ಒಟ್ಟು ಸೇರಿ ನಮ್ಮವರ ಒಗ್ಗಟ್ಟಿಗೆ ,ಸಾಂಸ್ಕೃತಿಕ ಪರಂಪರೆಗಳನ್ನು ಉಳಿಸುವಲ್ಲಿ , ಸಾಮಾಜಿಕ ಕಾರ್ಯಗಳನ್ನು ಮಾಡಲು ತುಳು ಭಾಷೆಯ ಅಭಿಮಾನದೊಂದಿಗೆ ನಮ್ಮ ಸಂಘವನ್ನು ಸದಾಶಯದ ಚಿಂತನೆಯೊಂದಿಗೆ  ಆರಂಭಿಸಿದ್ದು ಇಂದು ಈ ಸಂಘ ಹೆಮ್ಮರವಾಗಿ ಬೆಳೆದಿದೆಯೆನ್ನಲು ಹೆಮ್ಮೆಯಾಗುತ್ತಿದೆ . ಕಳೆದ ೧೬ ವರ್ಷಗಳ ಹಿಂದೆ ನನಗೆ ಈ ಸಂಘದ ಸಾರಥ್ಯವನ್ನು ವಹಿಸುವ ಅವಕಾಶ ಸಿಕ್ಕಿದ್ದು ನಿರಂತರವಾಗಿ ಸಂಘದ ಸದಸ್ಯರೆಲ್ಲರ ಪ್ರೀತಿ ವಿಶ್ವಾಸ ,ಸಹಕಾರದೊಂದಿಗೆ ಇಂದಿನ ವರೆಗೆ ಸಂಘವನ್ನು ಪ್ರಾಮಾಣಿಕವಾಗಿ ಬದ್ಧತೆಯೊಂದಿಗೆ ಮುನ್ನಡೆಸಲು ಶಕ್ತಿ ನೀಡಿದೆ . ಮುಂದೆ ಈ ಸಂಘವು ಹೊಸ ಕಾರ್ಯಕಾರಿ ಸಮಿತಿಯೊಂದಿಗೆ ಇನ್ನೂ ಹೆಚ್ಚಿನ ಉತ್ಸಾಹ ,ಸಂಘಟನಾ  ಶಕ್ತಿಯೊಂದಿಗೆ ಮುನ್ನಡೆಯುವಲ್ಲಿ ಪ್ರಯೊಬ್ಬ ಸದಸ್ಯರೂ ಸಹಕಾರ ನೀಡಿ ಬೆಂಬಲಿಸಬೇಕಾಗಿದೆ . ನನಗೆ ಸಹಕಾರ ನೀಡಿ ಬೆಂಬಲಿಸಿದ ಸಂಘದ ಕಾರ್ಯಕಾರಿ ಸಮಿತಿ ,ಮಹಿಳಾ ವಿಭಾಗ ಹಾಗೂ ನಾಸಿಕ್ ನ ತುಳುಕನ್ನಡಿಗರೆಲ್ಲರಿಗೂ ನನ್ನ ವಂದನೆಗಳು ಎಂದರು . ಮುಂದೆಯೂ ಸಂಘದ ಹಿತಚಿಂತನೆಯಲ್ಲಿ ಸಹಕಾರ ನೀಡುವುದಾಗಿ ತಿಳಿಸಿದರು .
 ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಭಾಸ್ಕರ ಶೆಟ್ಟಿ ,ಮುಖ್ಯ ಅತಿಥಿ ಮೋಹನ್ ಶೆಟ್ಟಿ  ,ಪ್ರಧಾನ ಕಾರ್ಯದರ್ಶಿ ಸಂಜೀವ ಕೆ ಬಂಗೇರ,ಗೌರವ ಕೋಶಾಧಿಕಾರಿ ಹರೀಶ್ ವಿ ಶೆಟ್ಟಿ ,ಜನಸಂಪರ್ಕಾಧಿಕಾರಿ  ರಾಜ್ ನರೇಶ್ ಶೆಟ್ಟಿ ,ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ  ಜಯಂತಿ ಅಳಾಪೆ ,ಸಲಹಾ ಸಮಿತಿಯ ಲಿಂಗಪ್ಪ ಶೆಟ್ಟಿ ಮತ್ತು ಗಂಗಾಧರ ಆಮೀನ್ ,ಮತ್ತು ಬಾಲಚಂದ್ರ ಕೋಟ್ಯಾನ್ ಉಪಸ್ಥಿತರಿದ್ದರು .
ಈ ಸಂದರ್ಭ ಮುಂದಿನ ಕಾರ್ಯಾವಧಿಗೆ ಸಂಘದ ನೂತನ ಅಧ್ಯಕ್ಷರನ್ನಾಗಿ ರಮಾನಂದ ಬಂಗೇರ ಇವರನ್ನು  ಅವಿರೋಧವಾಗಿ ಆಯ್ಕೆಗೊಳಿಸಲಾಯಿತು . ಪ್ರಧಾನ ಕಾರ್ಯದರ್ಶಿಯನ್ನಾಗಿ ಶ್ರೀಧರ ವಿ ಶೆಟ್ಟಿ ಹಾಗೂ ಯುವ ವಿಭಾಗದ ನೂತನ ಕಾರ್ಯಾಧ್ಯಕ್ಷರನ್ನಾಗಿ ಅನಿಲ್ ಕರ್ಕೇರಾ ಇವರನ್ನು ಆಯ್ಕೆಗೊಳಿಸಲಾಯಿತು . ಸಲಹಾ ಸಮಿತಿಯ ಲಿಂಗಪ್ಪ ಶೆಟ್ಟಿಯವರು ನೂತನ ಅಧ್ಯಕ್ಷರ ಹೆಸರನ್ನು ಘೋಷಿಸಿದರು . 
ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು . ಚಿತ್ರಶ್ರೀ ಕೃಷ್ಣ ಸಾಲ್ಯಾನ್ ಪ್ರಾರ್ಥಿಸಿದರು . ಮೊದಲಿಗೆ ಫೆ ೪ ರಂದು ಪುಲ್ವಾಮದಲ್ಲಿ ಹುತಾತ್ಮರಾದ ವೀರ ಯೋಧರ ಆತ್ಮಕ್ಕೆ ಶ್ರದ್ಧಾಂಜಲಿ ಕೋರಿ  ಸಭಿಕರೆಲ್ಲರೂ ಎದ್ದು ನಿಂತು ಎರಡು ನಿಮಿಷಗಳ ಮೌನ ಪ್ರಾರ್ಥನೆ ಸಲ್ಲಿಸಲಾಯಿತು . ಅಶಿತ್ ಟಿ ಶೆಟ್ಟಿಯವರು ವೀರಯೋಧರ ಬಗ್ಗೆ ತಿಳಿಸಿ ಶ್ರದ್ಧಾಂಜಲಿ ಸಲ್ಲಿಸುವಂತೆ ಮನವಿ ಮಾಡಿದರು  . ಕಲ್ಪನಾ ಎಸ್ ಬಂಗೇರ ಸಂಘದ ವಾರ್ಷಿಕ ಕಾರ್ಯಚಟುವಟಿಕೆಗಳ ವರದಿಯನ್ನು ವಾಚಿಸಿದರು . ಗೌರವ ಕೋಶಾಧಿಕಾರಿ ಹರೀಶ್ ವಿ ಶೆಟ್ಟಿ ಕಳೆದ ವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಿದರು . ಲಲಿತಾ ಕೆ ಶೆಟ್ಟಿ ,ಸುರೇಖಾ ಗಣೇಶ್ ಬಂಗೇರ ,ಪ್ರಭಾ ಆರ್ ಶೆಟ್ಟಿ ,ಜಯಂತಿ ಸುರೇಶ  ದೇವಾಡಿಗ ,ವಿಲಾಸಿನಿ ಪಿ ಶೆಟ್ಟಿ ,ದಾಮೋಧರ ಪೂಜಾರಿ ಸಂಘವು ನಡೆಸಿದ ವಿವಿಧ ಸ್ಪರ್ಧೆಗಳ ಬಹುಮಾನಿತರ ಬಹುಮಾನ ವಿತರಣಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು . ಜೊತೆ ಕೋಶಾಧಿಕಾರಿ ಪ್ರದೀಪ್ ರೈ ಅತಿಥಿಗಳನ್ನು  ಪರಿಚಯಿಸಿದರು .ಅತಿಥಿಗಳನ್ನು ಶಾಲು ಹೊದೆಸಿ ಸ್ಮರಣಿಕೆ ನೀಡಿ ಸಮ್ಮಾನಿಸಲಾಯಿತು . ಸಾಧು ಶೆಟ್ಟಿ ಪುಣೆ ಇವರನ್ನು ಸತ್ಕರಿಸಲಾಯಿತು . ಸಂಘದ ಕ್ರೀಡಾಕೂಟದಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು . ಗೌರವ ಪ್ರಧಾನ ಕಾರ್ಯದರ್ಶಿ ಸಂಜೀವ ಕೆ ಬಂಗೇರ ಸ್ವಾಗತಿಸಿದರು . ಶರಣ್ಯಾ ಎಂ ಶೆಟ್ಟಿ ಮತ್ತು ಜೊತೆ ಕಾರ್ಯದರ್ಶಿ ಮೊಹಮ್ಮದ್ ಶೇಖ್ ಸಾಹೇಬ್ ಕಾರ್ಯಕ್ರಮವನ್ನು ನಿರೂಪಿಸಿದರು .  ಜನಸಂಪರ್ಕಾಧಿಕಾರಿ ರಾಜ್ ನರೇಶ್ ಶೆಟ್ಟಿ ವಂದಿಸಿದರು . ಮಹೇಂದ್ರ ಕರ್ಕೇರ ,ಶ್ರೀನಿವಾಸ್ ಕೋಟ್ಯಾನ್ ,ವೆಂಕಪ್ಪ ನಾಯ್ಕ್ ,ಜಯರಾಮ್ ಬಂಗೇರ ,ದಿನೇಶ್ ಕೋಟ್ಯಾನ್ ಮತ್ತು ಗೋಪಾಲ್ ಪೂಜಾರಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು .  ಮಹಿಳಾ ವಿಭಾಗದ ಕಲ್ಪನಾ ಎಸ್ ಬಂಗೇರ ,ಮಮತಾ  ಬಿ ಶೆಟ್ಟಿ  ,ವಿಶಾಲ ಎಲ್ ಶೆಟ್ಟಿ ,ಪ್ರಮೀಳಾ ಜಿ ಅಮೀನ್ ,ಪ್ರಮೀಳಾ ಆರ್ ಶೆಟ್ಟಿ ಕಾರ್ಯಕ್ರಮದಂಗವಾದ ಅರಸಿನ  ಕುಂಕುಮ ಕಾರ್ಯಕ್ರಮವನ್ನು ನೆರವೇರಿಸಿದರು .
ಪ್ರತಿಭಾವಂತರಿಗಾಗಿ ನೀಡಲಾಗುವ ಬಹುಮಾನದ ಪ್ರಾಯೋಜಕತ್ವವನ್ನು ಬಾಲಚಂದ್ರ ಕೋಟ್ಯಾನ್ ನೀಡಿದರು . ಶ್ರೀಧರ್ ವಿ ಶೆಟ್ಟಿ ,ರಾಮಚಂದ್ರ ಶೆಟ್ಟಿ ,ಎಡ್ಮೇರ್ ಭಾಸ್ಕರ್ ಶೆಟ್ಟಿ ,ಸಂಜೀವ ಕೆ ಬಂಗೇರ ,ರಮಾನಂದ ಬಂಗೇರ ,ಉದಯ್ ಶೆಟ್ಟಿ ,ಪ್ರದೀಪ್ ಶೆಟ್ಟಿ ಮತ್ತು ಮೂರ್ತಿ ಶೇಠ್ ಪ್ರೀತಿಭೋಜನವನ್ನು ಪ್ರಾಯೋಜಿಸಿದರು . ಮನೋರಂಜನೆಯಂಗವಾಗಿ ಮುರಳಿ ಮಂಜಿತ್ತಾಯ ಮತ್ತು ಬಳಗ ನಾಸಿಕ್ ಇವರಿಂದ ಮಹಿಷಿ ಮರ್ದಿನಿ ಯಕ್ಷಗಾನ ರೂಪಕ ಹಾಗೂ ಅಭಿನಯ ಮಂಟಪ ,ಮುಂಬಯಿ ಕಲಾವಿದರಿಂದ “ಒಯಿಕ್ ಲಾ ದಿನ ಬರೊಡು ” ತುಳುನಾಟಕ ಪ್ರದರ್ಶನಗೊಂಡಿತು . ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತುಳುಕನ್ನಡಿಗರು ಉಪಸ್ಥಿತರಿದ್ದರು .

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ