ಪುಣೆ ಡಾ . ಕಲ್ಮಾಡಿ ಶ್ಯಾಮರಾವ್ ಕನ್ನಡ ಮಾಧ್ಯಮ ಹೈಸ್ಕೂಲ್ ವಿದ್ಯಾರ್ಥಿಗಳಿಂದ “ಕವಿಗೋಷ್ಠಿ “

0
290
ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಅಭಿರುಚಿ ಮೊಳಕೆಯೊಡೆಯಲು ಕವಿಗೋಷ್ಠಿ ಪೂರಕ -ಪಾಂಗಾಳ ವಿಶ್ವನಾಥ ಶೆಟ್ಟಿ 
ಪುಣೆ : (www.kiranvarta.com)ಪುಣೆ ಕನ್ನಡ ಸಂಘದ ಡಾ . ಕಲ್ಮಾಡಿ ಶ್ಯಾಮರಾವ್ ಕನ್ನಡ ಮಾಧ್ಯಮ ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ಮಾ ೮ ರಂದು ಶಾಲೆಯ ಸಭಾಂಗಣದಲ್ಲಿ ಕವಿಗೋಷ್ಠಿಯನ್ನು ಆಯೋಜಿಸಲಾಗಿತ್ತು . ವಿದ್ಯಾರ್ಥಿಗಳು ಉತ್ಸಾಹದಿಂದ ತಮ್ಮ ತಮ್ಮ ಸ್ವರಚನೆಯ ಕವಿತೆಗಳನ್ನು ವಾಚಿಸಿದರು .
ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಪುಣೆಯ ಹಿರಿಯ ಕವಿ ಪಾಂಗಾಳ ವಿಶ್ವನಾಥ ಶೆಟ್ಟಿಯವರು ವಹಿಸಿದ್ದರು .ಅವರು ವಿದ್ಯಾರ್ಥಿಗಳ  ಕವಿತೆಗಳನ್ನು ಆಲಿಸಿ ವಿಮರ್ಶಿಸಿ ಮಾರ್ಗದರ್ಶನ  ನೀಡುತ್ತಾ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಂದ   ಹೊಸಹೊಸ ಕೌಶಲ್ಯಗಳು ಹೊರಹೊಮ್ಮುತ್ತಿದೆ . ಅವರು ಬರೆದ ಸುಂದರ ಕವಿತೆಗಳನ್ನು ಕೇಳುವ ಸೊಭಾಗ್ಯ ನಮ್ಮದಾಗಿದೆ . ವಿದ್ಯಾರ್ಥಿಗಳು ತಮ್ಮ ಕವಿತೆಗಳಲ್ಲಿ ಅಂತ್ಯಪ್ರಾಸ ಹಾಗೂ ಆದಿಪ್ರಾಸಗಳನ್ನು ಬಹಳ ಸುಂದರವಾಗಿ ಉಪಯೋಗಿಸಿಕೊಂಡಿದ್ದಾರೆ . ಅವರ ಮನಸ್ಸಿನ ಭಾವನೆಗಳನ್ನು ಸುಂದರವಾಗಿ ಇಲ್ಲಿ ಪಡಿಮೂಡಿಸಿದ್ದಾರೆ . ಈ ವಯಸ್ಸಿನಲ್ಲಿ ಕವಿತೆಗಳನ್ನು ಬರೆಯುವುದರಿಂದ ಸಾಹಿತ್ಯದ ಅಭಿರುಚಿ ಬೆಳೆಯಲು ಸಾಧ್ಯವಿದೆ ಎಂದರು .
ಅತಿಥಿಗಳಾಗಿ ಉಪಸ್ಥಿತರಿದ್ದ ಪುಣೆ ಕನ್ನಡ ಸಂಘದ ಉಪಾಧ್ಯಕ್ಷೆ ,ಕವಯಿತ್ರಿ ಇಂದಿರಾ ಸಾಲ್ಯಾನ್ ಮಾತನಾಡಿ ವಿದ್ಯಾರ್ಥಿಗಳು ಬಹಳ ಸೊಗಸಾದ ಕವಿತೆಗಳನ್ನು ರಚಿಸಿ ತಮ್ಮ ಪ್ರತಿಭೆಗಳನ್ನು ಸಾದರಪಡಿಸಿದ್ದೀರಿ . ಸೇಬುಹಣ್ಣು ,ನುಗ್ಗೆಕಾಯಿ ,ಗುಲಾಬಿ ಹೂವು ,ಮೊಬೈಲ್ ಹಾವಳಿ ದೇಶಸೇವೆಯೇ ಈಶಗ ಸೇವೆ ,ನನ್ನ ಶಾಲೆ ,ತಂದೆತಾಯಿ ,ಗಿಡವೇ ಉಸಿರು ,ಸಿಟ್ಟು ,ಸಂತೋಷ ,ಕನಸು ,ರೈತನನ್ನು  ಉಳಿಸಿ ,ಚಂದಿರ ಹೀಗೆ ವಿಭಿನ್ನ ರೀತಿಯ ವಿಷಯಗಳನ್ನು ಆಯ್ದುಕೊಂಡು ಕವನಗಳನ್ನು ವೈವಿಧ್ಯಮಯವಾಗಿ ನಿರೂಪಿಸಿರುವುದು ಸಂತೋಷವಾಗುತ್ತಿದೆ . ನಿಮ್ಮ ಪ್ರಯತ್ನ ಹೀಗೆ ಮುಂದುವರಿದು ಭವಿಷ್ಯದಲ್ಲಿ ಉತ್ತಮ ಸಾಹಿತಿಗಳಾಗಿ ಬೆಳೆಯುವಲ್ಲಿ ಸಹಕಾರಿಯಾಗಲಿದೆ ಎಂದರು . ಜೈ ಭಾರತ ಜನನಿಯ ತನುಜಾತೆ ನಾಡಗೀತೆಯ ಮೂಲಕ ಕಾರ್ಯಕ್ರಮ ಆರಂಭವಾಯಿತು . ಶಾಲಾ ಮುಖ್ಯೋಪಾಧ್ಯಾಯರಾದ ಚಂದ್ರಕಾಂತ ಹಾರಕೂಡೆ ಯವರು ಅತಿಥಿಗಳನ್ನು ಪುಷ್ಪಗುಚ್ಛ ನೀಡಿ ಸತ್ಕರಿಸಿದರು . ವಿದ್ಯಾರ್ಥಿ ಕವಿಗಳನ್ನು ಶಾಲು ಹೊದೆಸಿ ಭಾಗವಹಿಸಿದ ಅತಿಥಿಗಳು ಬರೆದ  ಕವಿತೆಗಳ ಪುಸ್ತಕಗಳನ್ನು ನೀಡಿ ಸತ್ಕರಿಸಲಾಯಿತು .
ಕರ್ನಾಟಕದ ವಿಜಯನಗರ ಸಾಮ್ರಾಜ್ಯದ ವೈಭವಗಾಥೆಯನ್ನು ತಿಳಿಸುವ ಹಂಪೆಯ ಚಿತ್ರಗಳನ್ನು ಪ್ರದರ್ಶಿಸುತ್ತಾ ವಿದ್ಯಾರ್ಥಿನಿಯರು ಹಾಡುಗಳನ್ನು ಹಾಡಿ  ರಂಜಿಸಿದರು . ಕವನ ವಾಚಿಸಿದ ವಿದ್ಯಾರ್ಥಿಗಳನ್ನು ಸಹಪಾಠಿ ವಿದ್ಯಾರ್ಥಿಗಳು ಪರಿಚಯಿಸಿದರು . ಒಂಭತ್ತನೆಯ ತರಗತಿಯ ವಿದ್ಯಾರ್ಥಿಗಳಾದ ಲಕ್ಷ್ಮಿ ಕಲಶೆಟ್ಟಿ ,ಪ್ರಿಯಾಂಕಾ ಉಮಾಗೋಳ,ರೋಹಿತ್ ನಾಟೇಕರ ,ಸಾಹಿಲ್ ತುಂಬಗಿ ಕಾರ್ಯಕ್ರಮವನ್ನು ನಿರೂಪಿಸಿದರು . ಸಾಹಿತಿಗಳಾದ ಸಕ್ರೋಜಿ ದಂಪತಿಗಳು ,ನಾಟ್ಯಗುರು ಮದಂಗಲ್ಲು ಆನಂದ್ ಭಟ್ ,ಡಾ ಶೋಭಾ ಜೋಶಿ ,ಸಂಜೀವ ಕುಲಕರ್ಣಿ ಮತ್ತಿತರ ಗಣ್ಯರು ಕವಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು .  ಈ ಸಂದರ್ಭ ಅಂತಾರಾಷ್ಟ್ರೀಯ ಮಹಿಳಾ ದಿನದ ನಿಮಿತ್ತವಾಗಿ ಶಾಲೆಯ ಶಿಕ್ಷಕಿಯರನ್ನು ಸತ್ಕರಿಸಲಾಯಿತು .  ಚಿತ್ರದುರ್ಗದಲ್ಲಿ ನಡೆದ ಸಿರಿಗನ್ನಡ ಪ್ರತಿಭಾ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದ ವಿದ್ಯಾರ್ಥಿಗಳನ್ನು ಪ್ರಮಾಣಪತ್ರ ಹಾಗೂ ಪದಕಗಳನ್ನು ನೀಡಿ ಗೌರವಿಸಲಾಯಿತು . ಶಿಕ್ಷಕಿ ಶೋಭಾ ಪಂಚಾಂಗಮಠ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನು ಮಾಡಿದರು .ಶಾಲಾ ಶಿಕ್ಷಕ ವೃಂದ ಸಹಕಾರ ನೀಡಿದರು .

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ