ಬಂಟ್ಸ್ ಅಸೋಸಿಯೇಶನ್ ಪುಣೆ ಅದ್ದೂರಿ ಸಂಭ್ರಮದ ದಸರಾಪೂಜೆ , ದಾಂಡಿಯಾ ರಾಸ್ -ಕಿರಣ್ ವಾರ್ತಾ 

0
208
ಸನಾತನ ಸಂಸ್ಕೃತಿ ಉಳಿಸುವ ಜವಾಬ್ದಾರಿ ತಾಯಂದಿರ ಮೇಲಿದೆ -ವಿಶ್ವನಾಥ ಶೆಟ್ಟಿ ಪೇತ್ರಿ 
ಪುಣೆ : (ಕಿರಣ್ ವಾರ್ತಾ -www.kiranvarta.com)ಬಂಟ್ಸ್ ಅಸೋಸಿಯೇಶನ್ ಇದರ 9 ನೇ ನವರಾತ್ರಿ  ಸಂಭ್ರಮದಲ್ಲಿ ಭಾವಗವಹಿಸುವ  ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯವೆಂದು ಭಾವಿಸುತ್ತೇನೆ .  ಸಮಾಜಬಾಂಧವರನ್ನು ಒಗ್ಗೊಡಿಸುವ ಮೂಲಕ ನಾಡು ,ನುಡಿ ಸಂಸ್ಕೃತಿಯನ್ನು ಉಳಿಸುವ ಕಾಯಕದೊಂದಿಗೆ ೯ ರ ಸಂಭ್ರಮದಲ್ಲಿ ಪ್ರತಿಷ್ಠಿತ ಸಂಸ್ಥೆಯಾಗಿ ಗುರುತಿಸಿಕೊಂಡಿರುವುದು ಸಂಸ್ಥೆಯ ಹೆಗ್ಗಳಿಕೆಯಾಗಿದೆ .ಇಂದಿನ ಯುವ ಜನಾಂಗ ಪಾಶ್ಚ್ಯಾತ್ಯ ಸಂಸ್ಕೃತಿಯ ದಾಸರಾಗುತ್ತಿದ್ದು ನಮ್ಮತನವನ್ನು ಕಳೆದುಕೊಳ್ಳುವ ಆತಂಕದ ಪರಿಸ್ಥಿತಿಯಲ್ಲಿ ನಾವಿದ್ದೇವೆ . ಇಂತಹ ಕಾಲಘಟ್ಟದಲ್ಲಿ ನಮ್ಮ ಮಕ್ಕಳಿಗೆ ನಮ್ಮ  ಭವ್ಯ ಸನಾತನ ಸಂಸ್ಕೃತಿಯನ್ನು  ಕಲಿಸುವ ದೊಡ್ಡ ಜವಾಬ್ದಾರಿ ನಮ್ಮ ತಾಯಂದಿರಿಗಿದೆ .
ಬಾಲ್ಯದಿಂದಲೇ ನಮ್ಮ ಮಕ್ಕಳಿಗೆ  ಬದುಕು ಕಟ್ಟಿಕೊಳ್ಳುವ ,ಎಂತಹ ಕಷ್ಟದ ಸಂದರ್ಭದಲ್ಲಿಯೂ ಆತ್ಮವಿಶ್ವಾಸದಿಂದ  ಮುನ್ನಡೆಯುವ ಸಂಸ್ಕಾರವನ್ನು ಮನೆಯಲ್ಲಿ ತಾಯಂದಿರು ನೀಡಬೇಕಾಗಿದೆ ಎಂದು ಮುಂಬಯಿಯ ಕವಿ ,ಲೇಖಕ ಪೇತ್ರಿ ವಿಶ್ವನಾಥ ಶೆಟ್ಟಿ ಅಭಿಪ್ರಾಯಪಟ್ಟರು .  ಅವರು ಅ 6 ರಂದು ನಗರದ ಪೂನಾ ಕ್ಲಬ್ ಅಂಪಿ  ಥಿಯೇಟರ್ ನಲ್ಲಿ  ಬಂಟ್ಸ್ ಅಸೋಸಿಯೇಶನ್ ಪುಣೆ ಇದರ ವಾರ್ಷಿಕ  ದಸರಾ ಪೂಜೆ ,ದಾಂಡಿಯಾ ರಾಸ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ  ಉಪಸ್ಥಿತರಿದ್ದು ಮಾತನಾಡುತ್ತಿದ್ದರು .
ನವರಾತ್ರಿ ಸಂದರ್ಭ ದುರ್ಗಾ ದೇವಿಯನ್ನು ಆರಾಧಿಸುವುದರಿಂದ ಶ್ರೀದೇವಿಯು ನಮ್ಮೆಲ್ಲರ  ಕಷ್ಟ   ಕಾರ್ಪಣ್ಯಗಳನ್ನು ದೂರೀಕರಿಸುತ್ತಾಳೆ ಎಂಬ ನಂಬಿಕೆ ನಮ್ಮದಾಗಿದ್ದು ಈ ಸಂದರ್ಭ ನಡೆಯುವ ದಾಂಡಿಯಾ ಕಾರ್ಯಕ್ರಮ ನಮ್ಮ ಹಿಂದೂ ಧರ್ಮದ ಸಾಂಸ್ಕೃತಿಕ ಪರಂಪರೆಯ ಅಂಗವಾಗಿದೆ . ಈ ಸಂಸ್ಥೆ ಭವಿಷ್ಯದಲ್ಲಿ ಸಮಾಜಬಾಂಧವರೆಲ್ಲರ ಆಶೋತ್ತರಗಳನ್ನು ಪರಿಗಣಿಸಿ ಉತ್ತರೋತ್ತರ ಯಶಸ್ಸನ್ನು ಕಾಣಲಿ ಎಂದು ಪೇತ್ರಿ ನುಡಿದರು .
ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದ ಪುಣೆ ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಲತಾ ಸತೀಶ್ ಶೆಟ್ಟಿಯವರು  ಮಾತನಾಡಿ  ಇಂದಿನ ದಸರಾ ಪೂಜೆಯ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದಕ್ಕೆ ಆನಂದವಾಗುತ್ತಿದೆ . ದುಷ್ಟ ಶಕ್ತಿಗಳನ್ನು ನಿಗ್ರಹಿಸಿ ಶಿಷ್ಟರನ್ನು ರಕ್ಷಿಸುವ ಶ್ರೀದೇವಿಯನ್ನು ನವರಾತ್ರಿ ಸಂದರ್ಭದಲ್ಲಿ ಆರಾಧಿಸುವುದರಿಂದ ನಮ್ಮ ದುರಿತಗಳೆಲ್ಲವೂ ನಿವಾರಣೆಯಾಗುತ್ತದೆ ಎಂಬ ನಂಬಿಕೆ ನಮ್ಮದಾಗಿದೆ .  ಬಂಟ್ಸ್ ಅಸೋಸಿಯೇಶನ್ ನೊಂದಿಗೆ ನಮ್ಮ ಬಾಂಧವ್ಯ ಉತ್ತಮವಾಗಿದ್ದು ನಮ್ಮ ಯಾವುದೇ ಕಾರ್ಯಕ್ರಮಗಳಿಗೆ ಬಂಟ್ಸ್ ಅಸೋಸಿಯೇಶನ್ ಪದಾಧಿಕಾರಿಗಳು ನಿರೀಕ್ಷೆಗೂ ಮೀರಿ ಸಹಕಾರ ನೀಡಿದ್ದಾರೆ . ನಿಮ್ಮೆಲ್ಲರ ಪ್ರೀತಿ ವಿಶ್ವಾಸಗಳಿಗೆ ಚಿರಋಣಿಯಾಗಿದ್ದೇನೆ ಎಂದರು .
ಸಂಘದ  ಅಧ್ಯಕ್ಷರಾದ ಮಿಯ್ಯಾರ್ ಆನಂದ್ ಶೆಟ್ಟಿ ಯವರು ಸಭಾಧ್ಯಕ್ಷ ಸ್ಥಾನದಿಂದ ಮಾತನಾಡುತ್ತಾ ನಮ್ಮ ಸಂಘವು  ಪ್ರತೀ ವರ್ಷ ದಸರಾ ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸುತ್ತಾ ಬಂದಿದೆ . ಇಂದಿನ ಕಾರ್ಯಕ್ರಮಕ್ಕೆ ಅತಿಥಿಗಣ್ಯರು ಆಗಮಿಸಿ ನಮ್ಮ ಕಾರ್ಯಕ್ರಮದ ಸೊಬಗನ್ನು ಹೆಚ್ಚಿಸಿದ್ದಾರೆ . ಸಂಘದ ಮಾಜಿ ಅಧ್ಯಕ್ಷರು ,ಪದಾಧಿಕಾರಿಗಳು ಮಹಿಳಾ ವಿಭಾಗ ,ಯುವ ವಿಭಾಗ ಸೇರಿದಂತೆ ಎಲ್ಲರೂ ಇಂದಿನ ಕಾರ್ಯಕ್ರಮ ಯಶಸ್ವಿಯಾಗಲು ಶ್ರಮಿಸಿದ್ದು ಅವರೆಲ್ಲರಿಗೂ  ನಾನು ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ .  ಸಂಘವು ಯಶಸ್ವಿ ಹಾದಿಯಲ್ಲಿ ಮುನ್ನಡೆಯಲು ಸಮಾಜಬಾಂಧವರೆಲ್ಲರ ಸಹಕಾರ ಅಗತ್ಯವಾಗಿದೆ . ಸಮಾಜಬಾಂಧವರೆಲ್ಲರಿಗೂ ನವರಾತ್ರಿ ಹಬ್ಬದ ಹಾರ್ದಿಕ ಶುಭವನ್ನು ಹಾರೈಸುತ್ತೇನೆ ಎಂದರು .
  ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಗಣೇಶ್ ಹೆಗ್ಡೆ ,ಪ್ರಧಾನ ಕಾರ್ಯದರ್ಶಿ ಅರವಿಂದ ರೈ ,ಕೋಶಾಧಿಕಾರಿ ದಿನೇಶ್ ಶೆಟ್ಟಿ ನಿಟ್ಟೆ  ,ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ  ಸುಶ್ಮಿತ್ ಎಸ್ ಶೆಟ್ಟಿ ,ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ದೀಪಾ ಅರವಿಂದ್ ರೈ ,ಮಹಿಳಾ ವಿಭಾಗದ ಕಾರ್ಯದರ್ಶಿ ಉಷಾ ಉಲ್ಲಾಸ್ ಶೆಟ್ಟಿ  ಉಪಸ್ಥಿತರಿದ್ದರು .
ಅತಿಥಿಗಳನ್ನು ಸ್ಮರಣಿಕೆ ಹಾಗೂ ಪುಷ್ಪಗುಚ್ಛ ನೀಡಿ ಸತ್ಕರಿಸಲಾಯಿತು .ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರುಗಳನ್ನು ಹಾಗೂ ಗಣ್ಯರುಗಳನ್ನು ಗೌರವಿಸಲಾಯಿತು . ಅತಿಥಿ ಗಣ್ಯರು   ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು  . ಲತಾ ಎಸ್ ಶೆಟ್ಟಿ ಮತ್ತು ಶಾಲಿನಿ ಎಂ ಶೆಟ್ಟಿ ಪ್ರಾರ್ಥಿಸಿದರು . ಅಧ್ಯಕ್ಷ ಆನಂದ್ ಶೆಟ್ಟಿಯವರು ತುಳಸಿ ಕಟ್ಟೆಯಲ್ಲಿ ತೆನೆ ಪೂಜೆಯನ್ನು ನೆರವೇರಿಸಿದರು . . ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ದೀಪಾ ಎ ರೈ ಮತ್ತು ಸಮಿತಿ ಸದಸ್ಯರು  ಶ್ರೀದೇವಿಗೆ ಮಂಗಳಾರತಿ ಬೆಳಗಿ ಪೂಜೆ ಸಲ್ಲಿಸಿದರು . ಉಪಾಧ್ಯಕ್ಷ ಗಣೇಶ್ ಹೆಗ್ಡೆ  ಸ್ವಾಗತಿಸಿದರು .ಸಾಂಸ್ಕೃತಿಕ ಸಮಿತಿ ಉಪಕಾರ್ಯಾಧ್ಯಕ್ಷ ಲೋಹಿತ್ ಶೆಟ್ಟಿ ಹಾಗೂ ಮಹಿಳಾ ವಿಭಾಗದ ಕಾರ್ಯದರ್ಶಿ  ಉಷಾ ಯು ಶೆಟ್ಟಿ   ಅತಿಥಿಗಳನ್ನು ಪರಿಚಯಿಸಿದರು . ಕಾರ್ಯಕ್ರಮವನ್ನು  ಕೆಮ್ತೂರು ಸುಧಾಕರ ಶೆಟ್ಟಿ ನಿರೂಪಿಸಿದರು, ಮಾಜಿ ಅಧ್ಯಕ್ಷರಾದ ನಾರಾಯಣ ಕೆ ಶೆಟ್ಟಿ ವಂದಿಸಿದರು . ಕಾರ್ಯಕ್ರಮದಲ್ಲಿ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ,ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು .  ಸಭಾ ಕಾರ್ಯಕ್ರಮದ ನಂತರ ಸಂಘದ ಯುವ ವಿಭಾಗ ಹಾಗೂ ಮಹಿಳಾ ವಿಭಾಗದಿಂದ ಆಕರ್ಷಕ ದಾಂಡಿಯಾ ನೃತ್ಯ ಪ್ರದರ್ಶನ ಗಮನಸೆಳೆಯಿತು .ನಂತರ ಸೇರಿದ್ದ ಪುರುಷರು ,ಮಹಿಳೆಯರು ಹಾಗೂ ಮಕ್ಕಳು ದಾಂಡಿಯಾ ನೃತ್ಯಕ್ಕೆ ಹೆಜ್ಜೆ ಹಾಕಿದರು . ಸತೀಶ್ ಶೆಟ್ಟಿ ಎರವಾಡ ಮತ್ತು ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು .
ಶ್ರೀ ಗುರುದೇವಾ ಸೇವಾ ಬಳಗದ ಅಧ್ಯಕ್ಷ ಸದಾನಂದ ಕೆ ಶೆಟ್ಟಿ ,ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ,ಪುಣೆ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಮೊಳಹಳ್ಳಿ ಬಾಲಕೃಷ್ಣ ಶೆಟ್ಟಿ ,ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಅಧ್ಯಕ್ಷ  ವಿಜಯ್ ಶೆಟ್ಟಿ ಬೋರ್ಕಟ್ಟೆ ,ಬಂಟ್ಸ್ ಅಸೋಸಿಯೇಶನ್ ನ ನಿಕಟಪೂರ್ವ ಅಧ್ಯಕ್ಷರಾದ ನಾರಾಯಣ ಕೆ ಶೆಟ್ಟಿ ,ಮಾಜಿ ಅಧ್ಯಕ್ಷರಾದ ಕಟ್ಟಿಂಗೇರಿಮನೆ ಸುಭಾಶ್ಚಂದ್ರ ಹೆಗ್ಡೆ ,ಜಯ ಶೆಟ್ಟಿ ಮಿಯ್ಯಾರ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರುಗಳು , ಪದಾಧಿಕಾರಿಗಳುಹಾಗೂ ಸಮಾಜಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು .ಮಾಜಿ ಅಧ್ಯಕ್ಷ ಕಟ್ಟಿಂಗೇರಿಮನೆ ಸುಭಾಶ್ಚಂದ್ರ ಹೆಗ್ಡೆ ಪ್ರಾಯೋಜಕತ್ವದಲ್ಲಿ ನಾರಿಗೊಂದು ಸೀರೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು . ಸಂಘದ ಪದಾಧಿಕಾರಿಗಳು ,ಮಹಿಳಾ ವಿಭಾಗ ,ಯುವ ವಿಭಾಗದ ಸರ್ವ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು . ಪ್ರೀತಿ ಭೋಜನದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು .

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ