ಸರಕಾರದ ವ್ಯವಸ್ಥೆ  ಮತ್ತು ಪತ್ರಕರ್ತರ ಸ್ಥಿತಿಗತಿ

0
122

(ಕಿರಣ್  ವಾರ್ತಾ -www.kiranvarta.com)ಈಗ ಪತ್ರಕರ್ತರ ಸ್ಥಿತಿ ಸ್ವಲ್ಪ ಆತಂಕಕಾರಿಯಾಗಿಯೇ ಇದೆ. ಎಲ್ಲರ  ಸಮಸ್ಯೆಗಳ ಬಗ್ಗೆ ಸರಕಾರ ಮತ್ತು ಅಧಿಕಾರಿಗಳ ಕಣ್ಣು ತೆರೆಸುವ ಇವರು ತಮ್ಮ ಸಮಸ್ಯೆ ಬಗ್ಗೆ ಚಕಾರ ಎತ್ತದ ಸ್ಥಿತಿಯಲ್ಲಿದ್ದಾರೆ ಎಂಬುದು ವಾಸ್ತವ. ಪ್ರಜಾಪ್ರಭುತ್ವದ ನಾಲ್ಕನೆಯೆ ಅಂಗ ಎಂದು ಹೇಳಿಕೊಳ್ಳುವ ಮಾಧ್ಯಮ ರಂಗವು ಇಂದು ಹಿಂದಿನಷ್ಟು ಗೌರವ, ವಿಶ್ವಾಸಾರ್ಹತೆಯನ್ನು  ಹೊಂದಿಲ್ಲ ಎಂಬುದಕ್ಕೆ ಕಾರಣಗಳು ಹಲವಾರಿರಬಹುದು.  ಅದರೆ ಮಾಧ್ಯಮ ರಂಗ ಇಲ್ಲದ ಅಥವಾ ಮಾಧ್ಯಮ ರಂಗ ಬಹು ದುರ್ಬಲವಾದ ಸಂದರ್ಭದಲ್ಲಿ ಸಮಾಜದ ಸ್ಥಿತಿ ಹೇಗಿದ್ದೀತು ಎಂಬುದನ್ನು ಊಹಿಸಲೂ ಕಷ್ಟ.


ಪತ್ರಕರ್ತರೆಂದರೆ ಕಠಿನ ಪರಿಶ್ರಮಿಗಳು, ಬಿಡುವಿಲ್ಲದೆ ದುಡಿಯುವವರು, ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಲು ಪುರುಸೊತ್ತಿಲ್ಲದವರು, ಮನೆಮಂದಿಯೊಂದಿಗೆ ಸಮಯ ಕಳೆಯಲೂ ಪ್ರಯಾಸಪಡುವವರು ಮುಂತಾದವುಗಳನ್ನು ಅಲ್ಲಗಳೆಯುವಂತಿಲ್ಲ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳು ಪ್ರಬಲವಾಗುತ್ತಿರುವ ದಿನಗಳಲ್ಲಿ ಪತ್ರಕರ್ತರ ಮುಂದೆ ಅಭದ್ರತೆ ಮತ್ತು ಸವಾಲಿನ ಭೀತಿ ಹಿಂದೆಂದಿಗಿಂತಲೂ ಹೆಚ್ಚೇ ಇದೆ. ಇವೆಲ್ಲವನ್ನು ಗಮನಿಸಿ ತಾವು ಪತ್ರಕರ್ತರಿಗೆ ವಿಶೇಷ ಮತ್ತು ಅಗತ್ಯ ಸವಲತ್ತುಗಳನ್ನು ನೀಡುತ್ತೇವೆ ಎಂದು ಪ್ರತಿಯೊಂದು ಸರಕಾರವೂ ಹೇಳುತ್ತಲೇ ಬರುತ್ತಿದೆ. ಆದರೆ ಆ ಸವಲತ್ತುಗಳನ್ನು ಪಡೆಯುವ ಮತ್ತು ಪಡೆದಿರುವ ಮತ್ತು ಅದರಿಂದ ಹೊರತಾದ ಪತ್ರಕರ್ತರ ನಡುವಿನ ಅಂತರ ಗಮನಿಸಿದರೆ ಇಲ್ಲಿನ ತಾರತಮ್ಯ ಅಥವಾ ವ್ಯವಸ್ಥೆಯ ಲೋಪದ ದರ್ಶನವಾಗುತ್ತದೆ.
ಸರಕಾರದ ಮಾನ್ಯತೆ ಪಡೆದ ಪತ್ರಿಕೆಗಳಲ್ಲೇ ಇಂದು ಸಹಸ್ರಾರು ಸಂಖ್ಯೆಯ ಪತ್ರಕರ್ತರು 24¥7 ಆಗಿ ದುಡಿಯುತ್ತಿದ್ದಾರೆ. ಆದರೆ ಸರಕಾರದ ಮಟ್ಟದಲ್ಲಿ ಇವರೆಲ್ಲ ಮಾನ್ಯತೆ ಪಡೆದ ಪತ್ರಕರ್ತರಲ್ಲ. ಅರ್ಥಾತ್‌ ಪತ್ರಕರ್ತರೇ ಅಲ್ಲ ಎಂದು ಹೇಳಿದರೂ ತಪ್ಪಾಗದು. ಸರಕಾರದ ಯಾವುದೇ ಪ್ರಮುಖ ಸವಲತ್ತುಗಳಿದ್ದರೂ ಅದು ಮಾನ್ಯತೆ ಪಡೆದ (ಎಕ್ರಿಡಿಟೇಶನ್‌  ಕಾರ್ಡ್‌ ಹೋಲ್ಡರ್‌) ಪತ್ರಕರ್ತರಿಗೆ ಮಾತ್ರ ಸೀಮಿತ. ಈ ಕಾರ್ಡ್‌ ವಿತರಣೆಗೆ ಸರಕಾರ ತನ್ನದೇ  ಆದಂಥ ಮಾನದಂಡವನ್ನು ಮಾಡಿಕೊಂಡಿದೆ. ಅದು ಪತ್ರಿಕೆಯ ಪ್ರಸರಣ  ಸಂಖ್ಯೆ, ಪ್ರಕಟವಾಗುವ ನಗರ ಮುಂತಾದವುಗಳನ್ನು ಅವಲಂಬಿಸಿಕೊಂಡಿದೆ. ಆದರೆ  ಯಾರಿಗೆ ಸವಲತ್ತುಗಳ ಅಗತ್ಯ ಇಲ್ಲವೋ ಅಂಥವರ ಕೈಗಳಲ್ಲೇ ಇಂಥ ಕಾರ್ಡ್‌ಗಳು ಹೆಚ್ಚಿವೆ. ಜತೆಗೆ ಜನರಿಗೆ ಪರಿಚಯವಿಲ್ಲದ ಪತ್ರಿಕೆಗಳ ಹೆಸರಲ್ಲೂ ಇಂಥ ಕಾರ್ಡ್‌ಗಳು ಹಂಚಿಕೆಯಾಗಿವೆ ಎಂಬುದು ನಿಜಕ್ಕೂ ಬೇಸರದ ಸಂಗತಿಯೇ.
ಯಾವುದೇ ಒಂದು ರಾಜ್ಯಮಟ್ಟದ ಪತ್ರಿಕೆಯ ಸಂಪಾದಕೀಯ ವಿಭಾಗದಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದವರಿಗೂ ಈ ಕಾರ್ಡ್‌ ಸಿಕ್ಕಿರುವುದಿಲ್ಲ. ಅವರು ತಮ್ಮ ವೃತ್ತಿ ಜೀವನವನ್ನೆಲ್ಲ ಪತ್ರಿಕಾ ರಂಗದಲ್ಲಿಯೇ ಮುಗಿಸಿದ್ದರೂ ಸರಕಾರದ ಮಾನ್ಯತೆ ಪಡೆದ ಪತ್ರಕರ್ತರಾಗೋದೇ ಇಲ್ಲ. ಈ ವ್ಯವಸ್ಥೆ ಬದಲಾಗಬೇಕು.

ಆದೇಶ ಸಂಸ್ಥೆಗಳಿಗೆ ಮಾತ್ರವೇ?
ಪತ್ರಕರ್ತರ ಸವಲತ್ತುಗಳ ಬಗ್ಗೆ ಮಾಧ್ಯಮ ಸಂಸ್ಥೆಗಳಿಗೆ ಕೆಲವು ಕಟ್ಟಿನಿಟ್ಟಿನ ಸೂಚನೆ ನೀಡಲಾಗಿದೆ. ಅವರ ವೇತನ, ನೇಮಕಾತಿ ವ್ಯವಸ್ಥೆ, ಇತರ ಸವಲತ್ತುಗಳ ಬಗ್ಗೆ ಹೆಚ್ಚಿನ ಕಾಳಜಿ ಇರಿಸಲಾಗಿದೆ. ಆದರೆ ಇಂಥದ್ದೊಂದು ಆದೇಶವನ್ನು ಸರಕಾರಕ್ಕೆ ಯಾಕೆ ಕೊಡಬಾರದು? ಸರಕಾರ ಕೊಟ್ಟರೆ ಎಲ್ಲ ಪತ್ರಕರ್ತರಿಗೂ ಸವಲತ್ತು ಕೊಡಲಿ,
ಸರಕಾರವೇ ಮಾನದಂಡ ನಿಗದಿ ಮಾಡಲಿ.
ಪತ್ರಕರ್ತರು ಸರಕಾರದ ಮಾನ್ಯತೆ ಪಡೆದುಕೊಳ್ಳಲು ಹೊಸ ಮಾನದಂಡದ ಅಗತ್ಯವಿದೆ. ಅದನ್ನು ವೃತ್ತಿಪರ ಪತ್ರಕರ್ತರ ಸಂಖ್ಯೆ, ಅವರ ಅಗತ್ಯ, ಸೇವಾವಧಿ ಮುಂತಾದ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಸರಕಾರವೇ ನಿಗದಿ ಮಾಡಲಿ. ರೇಷನ್‌ ಕಾರ್ಡ್‌ ಪಡೆಯಲು, ಕರ್ನಾಟಕದ ನಿವಾಸಿ ಎಂದು ಪರಿಗಣಿಸಲ್ಪಡಲು, ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಲು, ಸರಕಾರದ ಶಿಕ್ಷಣ ಸವಲತ್ತುಗಳು ಸಹಿತ ಇನ್ನಿತರ ಹಲವು ಯೋಜನೆಗಳ ಫ‌ಲಾನುಭವಿಗಳ ಆಯ್ಕೆಗಾಗಿ ಸರಕಾರ ತನ್ನದೇ ಆದಂಥ ನ್ಯಾಯೋಚಿತ ಮಾನದಂಡ ನಿಗದಿ ಮಾಡಿದೆ. ರಾಜ್ಯದಲ್ಲಿ ಇಷ್ಟು ವರ್ಷದಿಂದ ವಾಸ್ತವ್ಯ ಇರುವವರು, ಕನ್ನಡ ಬಲ್ಲವರು ಮುಂತಾದ ಬೇರೆ ಬೇರೆ ನಿಯಮಗಳನ್ನು ಇಲ್ಲಿ ವಿಧಿಸಲಾಗಿದೆ.  ಅದೇ ರೀತಿ ಇಂತಿಷ್ಟು ವರ್ಷ ಮಾನ್ಯತೆ ಪಡೆದ ಪತ್ರಿಕೆಗಳಲ್ಲಿ ದುಡಿದವರಿಗೆ ಸರಕಾರದ ಮಾನ್ಯತೆ ನೀಡುವ ಪ್ರಯತ್ನವಾಗಲಿ.  ನಿವೃತ್ತಿವರೆಗೂ ಮಾನ‌Âತೆ ಪಡೆಯದ ಪತ್ರಕರ್ತರಾಗಿ ದುಡಿಯೋದೆಂದರೆ ಅದು ಯಾರಿಗೂ ಶೋಭೆ ತರುವ  ವಿಷಯವಲ್ಲ.

ಸರಕಾರಕ್ಕೆ ಮಾಹಿತಿ ಕೊರತೆ?
ಪತ್ರಕರ್ತರ ನಿಜವಾದ ಸ್ಥಿತಿಗತಿ ಬಗ್ಗೆ ಸರಕಾರಕ್ಕೆ ಮಾಹಿತಿಯ ಕೊರತೆಯಿದ್ದರೂ ಇರಬಹುದು. ಪತ್ರಕರ್ತರ ನಾಯಕರು ಎಂದು ಗುರುತಿಸಿಕೊಳ್ಳುವವರು ಪ್ರಾಮಾಣಿಕವಾಗಿ  ತಮ್ಮೊಂದಿಗೆ ದುಡಿಯುವ ಇತರ ಬಡ ಪತ್ರಕರ್ತರ ಹಿತಕ್ಕೂ ಶ್ರಮಿಸಿ ಈ ಬಗ್ಗೆ ಸರಕಾರದ ಗಮನ ಸೆಳೆಯಬೇಕು. ಈಚೆಗೆ ಅಕಾಲಿಕವಾಗಿ ಮೃತಪಟ್ಟ ಕೆಲವು ಪತ್ರಕರ್ತರಿಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ತಲಾ 5 ಲ.ರೂ.ಗಳ ಧನ ಸಹಾಯ ನೀಡಲು ಆದೇಶಿಸಿದ್ದಾರೆೆ. ಭವಿಷ್ಯದಲ್ಲಿ ಇಂಥ  ಘಟನೆ ನಡೆದಾಗಲೂ ಈ ಪರಿಹಾರ ನೀಡಲಾಗುವುದು ಎಂದು ತಮ್ಮನ್ನು ಭೇಟಿಯಾದ ಪತ್ರಕರ್ತರ ನಿಯೋಗಕ್ಕೆ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದೂ  ಸುದ್ದಿಯಾಗಿದೆ. ಆದರೆ ಈಗಾಗಲೇ ಅಕಾಲಿಕವಾಗಿ ಮೃತಪಟ್ಟ ಎಷ್ಟೋ ಪತ್ರಕರ್ತರಿಗೆ  ಈ ಸಹಾಯಧನ ಸಿಕ್ಕಿಲ್ಲ.  ಅಂಥವರ ಹೆಸರನ್ನು ಸಂಘಟನೆಯವರು ಸರಕಾರದ ಗಮನಕ್ಕೆ ತಂದು ಸಹಾಯ ಕೊಡಿಸುವಂತಾಗಬೇಕು.

ತಳಮಟ್ಟದ ಚರ್ಚೆ ನಡೆಯಲಿ
ಈಗ ಮಂಗಳೂರಿನಲ್ಲಿ ರಾಜ್ಯ ಮಟ್ಟದ ಪತ್ರಕರ್ತರ ಸಮಾವೇಶ ನಡೆಯುತ್ತಿದೆ. ಇಲ್ಲಿ ಸೈದ್ದಾಂತಿಕ ವಿಷಯಗಳ ಜತೆಗೆ ಪತ್ರಕರ್ತರು ನಿಜವಾಗಿ ಅನುಭವಿಸುವಂಥ ಸಮಸ್ಯೆಗಳ ಬಗ್ಗೆ ಹೆಚ್ಚು ಚರ್ಚೆ ನಡೆಯಬೇಕು. ಪತ್ರಕರ್ತರು ಮಾನಸಿಕ ನೆಮ್ಮದಿಯಿಂದಿದ್ದರೆ ಮಾತ್ರ ಮಾಧ್ಯಮ ರಂಗದ ನೆಮ್ಮದಿಯನ್ನೂ ಕಾಪಾಡಲು ಸಾಧ್ಯ. ಈ ಸಮಾವೇಶದಲ್ಲಿ ಸರಕಾರದ ಮಟ್ಟದ ಗಣ್ಯಾತಿಗಣ್ಯರು ಪಾಲ್ಗೊಳ್ಳುವುದರಿಂದ ಪತ್ರಕರ್ತರ ಬೇಗುದಿಯನ್ನು ತೆರೆದಿಡಲು ಇದು ಸಕಾಲ. ಇದು ಪತ್ರಕರ್ತರ ಸಮಾವೇಶವೇ ಆಗಿರುವುದರಿಂದ ಮಾಧ್ಯಮಗಳಲ್ಲಿ ಚರ್ಚಿಸಲಾಗದಂಥ ವಿಷಯಗಳನ್ನು ಕೂಡ ಇಲ್ಲಿ ಚರ್ಚಿಸಲು ಅವಕಾಶವಿದೆ. ಮಾಧ್ಯಮ ಸಮಾಜದ ಸೊತ್ತು. ಅದರಲ್ಲಿ ಚರ್ಚೆಗೆ ಇಂಥದ್ದೇ ಎಂಬೊಂದು ಮಿತಿಯಿದೆ. ಆದರೆ ಪತ್ರಕರ್ತರ ಸಮಾವೇಶವು ಪತ್ರಕರ್ತರ ವಿಷಯಗಳಿಗೆ, ಪತ್ರಕರ್ತರ ಹಿತಕ್ಕೆ, ಪತ್ರಕರ್ತರ ಸದೃಡತೆಗೆ, ಪತ್ರಕರ್ತರ ಆರೋಗ್ಯಕರ ಬದಲಾವಣೆ ಬಗೆಗಿನ ಚರ್ಚೆಗೆ ವೇದಿಕೆಯಾಗಲಿ.

-ಪುತ್ತಿಗೆ ಪದ್ಮನಾಭ ರೈ


(ತಾಜಾ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಸಂಪರ್ಕಿಸಿ .. www.kiranvarta.com -ಕಿರಣ್ ವಾರ್ತಾ .. ಇದು ನಿಮ್ಮದೇ ಸುದ್ದಿ ವಾಹಿನಿ …ನಿಮ್ಮ ವ್ಯಾಪಾರ ,ವಹಿವಾಟು .ಜನ್ಮದಿನ ,ಅಭಿನಂದನೆ , ಯಾವುದೇ ರೀತಿಯ ಜಾಹೀರಾತುಗಳನ್ನು ಸ್ವೀಕರಿಸಲಾಗುವುದು…   ಜಾಹೀರಾತಿಗಾಗಿ ಸಂಪರ್ಕಿಸಿ -9890916615…ಜಾಹೀರಾತು ನೀಡಿ ಪ್ರೋತ್ಸಾಹಿಸಿ )

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ