ಪುಣೆಯಲ್ಲಿನ ತುಳುನಾಡ ಮಾಣಿಕ್ಯ ,ಅಜಾತಶತ್ರು ಜಗನ್ನಾಥ ಶೆಟ್ಟಿ ಓಣಿಮಜಲು

0
795

ಪುಣೆಯಲ್ಲಿನ ತುಳುನಾಡ ಮಾಣಿಕ್ಯ ,ಅಜಾತಶತ್ರು ಜಗನ್ನಾಥ ಶೆಟ್ಟಿ ಓಣಿಮಜಲು 

ಸಂದರ್ಶನ :ಕಿರಣ್ ಬಿ ರೈ ಕರ್ನೂರು ,ಪತ್ರಕರ್ತರು ಪುಣೆ
 

ಪರೋಪಕಾರಾಯ ಫಲಂತಿ ವೃಕ್ಷ….
ಪರೋಪಕಾರಾಯ ವಹಂತಿ ನದ್ಯ :
ಪರೋಪಕಾರಾಯ ದುಹತಿ ಗಾವಃ
ಪರೋಪಕಾರಾರ್ಥಾಯ ಮಿದಂ ಶರೀರಂ ….

ಪರೋಪಕಾರದ ನಿಮಿತ್ತ ವೃಕ್ಷಗಳು ಹಣ್ಣನ್ನು ಕೊಡುತ್ತವೆ . ನದಿಗಳು ಪ್ರವಹಿಸುತ್ತವೆ . ದನ ಹಾಲನ್ನು ಕೊಡುತ್ತದೆ . ನಮ್ಮ ದೇಹವಿರುವುದೂ ಪರೋಪಕಾರದ ಸಲುವಾಗಿಯೇ . ಪರೋಪಕಾರ ಮನೋಭಾವ ಪರಸ್ಪರ ಸಹಕಾರ ಮನೋವೃತ್ತಿ ,ಸಹನೆ ,ಬದುಕಿನಲ್ಲಿ ಕಷ್ಟದಲ್ಲಿರುವ ಜನರಿಗೆ ,ನೊಂದವರಿಗೆ ಸಾಂತ್ವನ ನೀಡಿ ಸಹಾಯ ಮಾಡುವುದು ,ಕಷ್ಟವೂ ,ಸುಖವೂ ಇದ್ದುದನ್ನು ಅನ್ಯರೊಡನೆ ಹಂಚಿಕೊಂಡು ತಿನ್ನುವ ಸ್ವಭಾವ ,ಇಂತಹ ಗುಣಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಬದುಕಿಗೆ ಬೆಲೆ ಬರುತ್ತದೆ . ವ್ಯಕ್ತಿಗೆ  ಗೌರವ ಸಿಗುತ್ತದೆ . ಅಂತಹ ವಿಶೇಷ ಗುಣಗಳೆಲ್ಲವನ್ನೂ ತನ್ನ ಬದುಕಿನುದ್ದಕ್ಕೂ ಅನುಸಂಧಾನ ಮಾಡಿಕೊಂಡಿರುವ ಅಪೂರ್ವ ,ಅನನ್ಯ ವ್ಯಕ್ತಿತ್ವ ಅದು ಪುಣೆಯಲ್ಲಿರುವ ತುಳುನಾಡಿನ ಮಾಣಿಕ್ಯ ಜಗನ್ನಾಥ ಶೆಟ್ಟಿ ಯವರದ್ದಾಗಿದೆ . . ತನ್ನ ಅಪರಿಮಿತ ಸಾಧನೆ ,ಫಲಾಪೇಕ್ಷೆಯಿಲ್ಲದೆ ಮಾಡುತ್ತಿರುವ ಸೇವಾ ಕಾರ್ಯಗಳಿಗೆ ಯಾವತ್ತೂ ಅಹಂ ಭಾವವನ್ನು ಬೆಳೆಸಿಕೊಳ್ಳದೆ ,ಯಾವುದೇ ಪ್ರಚಾರವನ್ನು ಬಯಸದೆ ಬಡವ ,ದೀನ ,ದುರ್ಬಲರ ,ಸಮಾಜಕ್ಕಾಗಿಯೇ ತನ್ನನ್ನು ಸಮರ್ಪಿಸಿಕೊಂಡ ಅವರ ವ್ಯಕ್ತಿತ್ವ ಅನ್ಯರಿಗೆ ಮಾದರಿಯಾಗಿದೆ . ಇದೀಗ ತನ್ನ ಬದುಕಿನ ಹೆಜ್ಜೆಗೆ ೮೫ ವರುಷ ತೊಂಬಿದರೂ ಮುಖದಲ್ಲಿ ಅದ್ಭುತ ತೇಜಸ್ಸು ,ಬಂದವರನ್ನು ಮಂದಹಾಸದಿಂದ ಆತ್ಮೀಯವಾಗಿ ಮಾತನಾಡಿಸುವ ಅವರ ಶೈಲಿ ,ಸದಾ ಶಾಂತಿಚಿತ್ತದಿಂದ ವ್ಯವಹರಿಸುವ ಕಾರ್ಯಶೈಲಿ ,ನಾಡು ,ನುಡಿ ,ಸಂಸ್ಕೃತಿಯ ಬಗೆಗಿನ ಅಪೂರ್ವ ಪ್ರೀತಿ ನಾನೆಲ್ಲೂ ಕಂಡಿಲ್ಲ . ಬಹುಶ ಅವರ ಜೀವನದ ಪುಟಗಳನ್ನು ಅಕ್ಷರಗಳಲ್ಲಿ ಪೋಣಿಸಿ ದಾಖಲಿಸುವ ಮನಸ್ಸು ಅವರ ವ್ಯಕ್ತಿವತ್ವವನ್ನು ನೋಡನೋಡುತ್ತಾ ಸಹಜವಾಗಿಯೇ ನನ್ನಲ್ಲಿ ಅನುರಣಿಸಿತೆಂದರೆ ತಪ್ಪಾಗಲಾರದು . ಅವರು ಅಜಾತಶತ್ರು … ಇಂದಿಗೂ … ಎಂದಿಗೂ … ಎಂದೆಂದಿಗೂ. .. ಅಜಾತಶತ್ರು “ಎನ್ನುವ ಹೆಸರಿನಲ್ಲಿ ಅವರ ಸಿದ್ಧಿಸಾಧನೆಗಳ ಬಗೆಗಿನ ಅಭಿನಂದನಾ ಗ್ರಂಥಕ್ಕಾಗಿ ಅವರನ್ನು ಸಂದರ್ಶಿಸಿದ ಸಂಕ್ಷಿಪ್ತ ವರದಿ ಇಲ್ಲಿ ನೀಡುತ್ತಿದ್ದೇನೆ .

ನಿಮ್ಮ ಬಾಲ್ಯದ ದಿನಗಳು ಹೇಗಿತ್ತು ?

ಬಾಲ್ಯದ ದಿನಗಳು ತುಂಬಾ ಕಷ್ಟದ ದಿನಗಳಾಗಿತ್ತು . ಸಣ್ಣ ಬೇಸಾಯವಿದ್ದ ನನ್ನ ತಂದೆ  ಕೌಡೂರು  ಹೊನ್ನಯ ಯಾನೆ ಬಾಬು ಶೆಟ್ಟಿಯವರು ತುಂಬಾ ಸರಳ ,ಪರೋಪಕಾರಿ ಮನೋಭಾವದವರು ,ಬಡ ಕೃಷಿ ಕುಟುಂಬದಿಂದ ಬಂದವರು .ತಾಯಿ ಪುಟ್ಟಮ್ಮ ಶೆಟ್ಟಿಯವರು ಸದ್ಗುಣವಂತೆ .ಮಕ್ಕಳೆಂದರೆ ಅಪಾರ ಪ್ರೀತಿ .ಅದರಲ್ಲೂ ಮನೆಗೆ ಯಾರೇ ಬರಲಿ  ಖಾಲಿ ಹೊಟ್ಟೆಯಲ್ಲಿ ಯಾರನ್ನೂ ಕಳಿಸುತ್ತಿರಲಿಲ್ಲ . ಊಟಕ್ಕೆ ಅನ್ನ ಬೇಯಿಸುವಾಗಲೂ ಸ್ವಲ್ಪ ಹೆಚ್ಚೇ ಬೇಯಿಸುತ್ತಿದ್ದರು . ಊಟದ ಸಮಯ ಯಾರಾದರೋ ಮನೆಗೆ ಬಂದರೆ ಬರಿ ಹೊಟ್ಟೆಯಲ್ಲಿ ಹೋಗಬಾರದೆನ್ನುವ ಕಳಕಳಿ ಅವರದ್ದಾಗಿತ್ತು .  ನಾನೊಬ್ಬ ಗಂಡು ಹಾಗೂ ಮೂವರು ಸಹೋದರಿಯರನ್ನೊಳಗೊಂಡ ಕುಟುಂಬ ನಮ್ಮದು . ೫ ನೇ ತರಗತಿಯವರೆಗೆ ಓಣಿಮಜಲು ಪ್ರಾಥಮಿಕ ಶಾಲೆಯಲ್ಲಿ ಕಲಿತಿದ್ದೆ .ಆವಾಗ ನನ್ನ ಶಿಕ್ಷಕರಾದ ಸಂಜೀವ ಹೆಗ್ಡೆಯವರಿಗೆ ನಾನೆಂದರೆ ಬಲು ಪ್ರೀತಿ . ನನ್ನ ಜೀವನದಲ್ಲಿ ಅವರ ಪ್ರಭಾವ ಬಹಳಷ್ಟಿದೆ . ಅವರನ್ನು ನಾನೆಂದಿಗೂ ಮರೆಯಲಾರೆ .

ನೀವು ಊರು ಬಿಟ್ಟು ಮಹಾರಾಷ್ಟ್ರಕ್ಕೆ ಬಂದ ಬಗೆ ಹೇಗೆ ?

. ನಾನು ೧೩ ನೇ ವರ್ಷದವನಿರುವಾಗ ಮುಂಬಯಿಯಲ್ಲಿದ್ದ ನಮ್ಮೂರಿನ ಸುಂದರ್ ಶೆಟ್ಟಿಯವರು ಊರಿಗೆ ಬಂದಿದ್ದರು . ಕೃಷಿಯಿಂದ ಹೊಟ್ಟೆ ತುಂಬಿಸಿಕೊಳ್ಳಬಹುದಾಗಿದ್ದರೂ ಆರ್ಥಿಕವಾಗಿ ಕಷ್ಟದ ದಿನಗಳಾಗಿತ್ತು . ಇದನ್ನು ಮನಗಂಡ ನನ್ನಜ್ಜಿ ಸುಂದರ ಶೆಟ್ಟಿಯವರೊಂದಿಗೆ ಮುಂಬಯಿಗೆ ಹೋಗುವಂತೆ ಸಲಹೆ ನೀಡಿದರು .ಆದರೆ ನನ್ನ ತಂದೆಯವರಿಗೆ ನನ್ನನ್ನು ದೂರದೂರಿಗೆ ಕಲಿಸಲು ಮನಸ್ಸಿರಲಿಲ್ಲ . ಆದರೂ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಸುಸ್ಥಿತಿಯಲ್ಲಿರದ ಕಾರಣ ಅಜ್ಜಿಯ ಮಾತಿಗೆ ಒಪ್ಪಿಕೊಂಡರು .  ಮುಂಬಯಿಗೆ ಕರೆತಂದ ನನ್ನನು ದಾದರ್ ನಲ್ಲಿ ಅಚ್ಚಣ್ಣ ಶೆಟ್ಟಿ ಎಂಬವರ ಹೋಟೆಲಿನಲ್ಲಿ ಕೆಲಸಕ್ಕೆ  ಸೇರಿಸಿದರು . ಆವಾಗ ನನಗೆ ಒಂದು  ಚಡ್ಡಿ ಹಾಗು ಅಂಗಿಯಿದ್ದುದನ್ನು ಮನಗಂಡ ತುಂಬಾ ಒಳ್ಳೆಯ ಮನುಷ್ಯರಾದ ಅವರು ನನಗೆ ಹೊಸ ಬಟ್ಟೆಗಳನ್ನು ಖರೀದಿಸಿ ಕೊಟ್ಟರು . ಅಚ್ಚಣ್ಣ ಶೆಟ್ಟಿಯವರು ನನ್ನನ್ನು ಬಹಳಷ್ಟು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು . ಆ ಕಾಲದಲ್ಲಿ ಕೆಲಸವೆಂದರೆ ಮೈ ತುರಿಸಿಕೊಳ್ಳಲೂ ಸಮಯವಿದ್ದಿರಲಿಲ್ಲ . ಸುಮಾರು ೫ ವರ್ಷ ೪ ರೂ ಸಂಬಳಕ್ಕೆ ಅಲ್ಲಿ ಬಹಳ ಕಷ್ಟದಿಂದ ಕೆಲಸ ಮಾಡಿದ್ದೆ . ನಂತರ ಕಲ್ಯಾಣ್ ನಲ್ಲಿ ಕೆಲಸಕ್ಕಿದ್ದ ನನ್ನ ಮಾವ ಮಹಾಬಲ ಯಾನೆ ಶ್ರೀಧರ ಶೆಟ್ಟಿಯವರು ಕರೆದುಕೊಂಡು ಹೋಗಿ ಸ್ವಲ್ಪ ಕಾಲ ಕಲ್ಯಾಣ್ ನಲ್ಲಿ ಕೆಲಸಕ್ಕೆ ಸೇರಿಸಿದರು .

ತಾವು ಪುಣೆಗೆ ಹೇಗೆ ಬಂದಿರಿ ?

ನಗುತ್ತಾ …ಥಾಟ್(ಪ್ಲೇಟ್ ) ತೊಳೆಯುವಲ್ಲಿಂದ ಪುಣೆಯಲ್ಲಿ ನನ್ನ ಜೀವನ ಆರಂಭವಾಯಿತು  . ಕಲ್ಯಾಣ್ ನಲ್ಲಿ  ಕೆಲಸ ಮಾಡುತ್ತಿದ್ದ ನನ್ನನ್ನು ಮಾವನವರು  ಪುಣೆಗೆ ಕರೆದುಕೊಂಡು ಬಂದು ಜಂಗ್ಲಿ ಮಹಾರಾಜ್ ರೋಡಿನಲ್ಲಿ ಇರಾನಿ ಹೋಟೆಲಿನಲ್ಲಿ ಮುಸುರೆ ತಿಕ್ಕುವ ಕೆಲಸಕ್ಕೆ ಸೇರಿಸಿದರು . ಅಲ್ಲಿ ಕೆಲಸಕ್ಕಿದ್ದುಕೊಂಡು ಹೋಟೆಲ್ ನ ಬಗ್ಗೆ ಅನುಭವಗಳನ್ನು ಗಳಿಸಿಕೊಂಡೆ . ನಂತರ ಅವರು ಸ್ವಂತ ಸಣ್ಣದಾದ ಹೋಟೆಲೊಂದನ್ನು ನಡೆಸಿಕೊಂಡಿದ್ದರು . ಅವರು ಅಪಘಾತದಲ್ಲಿ ತೀರಿಕೊಂಡಾಗ ಅವರ ಮಕ್ಕಳು ಚಿಕ್ಕವರಾಗಿದ್ದರು . ನಂತರ ಅವರ ಹೋಟೆಲನ್ನು ನಡೆಸುವ ಜವಾಬ್ದಾರಿ ನನಗೆ ಬಂತು , ಹಾಗೂ ಅವರ ಮಕ್ಕಳನ್ನು ನಾನೇ ನೋಡಿಕೊಂಡೆ . ನಂತರದ ದಿನಗಳಲ್ಲಿ ರೂಪಾಲಿ ,ವೈಶಾಲಿ ಸಣ್ಣದಿದ್ದ ಹೋಟೆಲುಗಳನ್ನು  ತನ್ನ ಪರಿಶ್ರಮದಿಂದ ಹಂತಹಂತವಾಗಿ ಅಭಿವೃದ್ಧಿ ಪಡಿಸಿ ಬೆಳೆಸಿದೆ . ಕರ್ತವ್ಯನಿಷ್ಠೆ ಎಂಬಂತೆ ಕಠಿಣ ಪರಿಶ್ರಮ ,ಪ್ರಾಮಾಣಿಕ ದುಡಿಮೆಯ ಪ್ರತಿಫಲವಾಗಿ ಉದ್ಯಮದಲ್ಲಿ ಯಶಸ್ಸನ್ನು ಪಡೆದುಕೊಂಡೆ .

ನಿಮ್ಮ ಜೀವನದಲ್ಲಿ ನೀವು ಮರೆಯಲಾರದ ಕಷ್ಟದ ದಿನಗಳು ನೆನಪಿದೆಯಾ ?

ಕಷ್ಟದ ಜೀವನದ ಹಾದಿಯೇ ನನ್ನನ್ನು ಮನುಷ್ಯನಾಗಿ ಬೆಳೆಸಿದೆ . ಅಂತಹ ಬಹಳಷ್ಟು ದಿನಗಳನ್ನು ನಾನು ಕಂಡಿದ್ದೇನೆ . ಕಷ್ಟದ ದಿನಗಳಲ್ಲಿಯೇ ನಾನು ಬೆಳೆದು ಬಂದಿದ್ದೇನೆ .    ಕೆಲವೊಮ್ಮೆ ಮುಸುರೆ ತಿಕ್ಕಿ ಕೈಯೆಲ್ಲಾ ಗಾಯಗಳಾಗಿ ರಾತ್ರಿ ಕಡಾಯಿಯಲ್ಲಿರುವ ಎಣ್ಣೆಯನ್ನು ಕೈಗೆ ಹಚ್ಚಿ ಮಲಗಿಕೊಳ್ಳುತ್ತಿದ್ದೆ . ಅಂತಹ ಕಷ್ಟದ  ದಿನಗಳು ಯಾರಿಗೂ ಬರಬಾರದು . ಆ ದಿನಗಳನ್ನು ನೆನೆಸಿಕೊಂಡಾಗ ಈಗಲೂ ಕಣ್ಣಲ್ಲಿ ನೀರು ಬರುತ್ತದೆ . ಅದಕ್ಕಾಗಿಯೇ ನನ್ನ ಹೋಟೆಲಿನ ಕೆಲಸಗಾರರಿಗೆ ಯಾವುದೇ ಕಷ್ಟ ಬಂದರೂ ಅವರ ಕಷ್ಟವನ್ನು ಮನಗಂಡು  ಸ್ಪಂದಿಸುತ್ತೇನೆ . ಅವರು ನನ್ನ ಕುಟುಂಬವಿದ್ದಂತೆ . ಅವರಿಂದಾಗಿಯೇ ನಾನು ಸುಸ್ಥಿತಿಯನ್ನು ಕಂಡಿದ್ದೇನೆ . ಪ್ರತಿಯೊಬ್ಬರೂ ಹೋಟೆಲ್ ಕಾರ್ಮಿಕರನ್ನು ಕೀಳಾಗಿ ಕಾಣಬಾರದು . ಇಂದು ಹೋಟೆಲ್ ಉದ್ಯಮ ಬೆಳೆದಿದೆ ಎಂದರೆ ಅದಕ್ಕೆ ಕಾರ್ಮಿಕರ ಶ್ರಮವೇ ಕಾರಣ ಎಂಬುದನ್ನು ನಾವು ಮನಗಾಣಬೇಕಾಗಿದೆ .

ನಿಮ್ಮ ಜೀವನದಲ್ಲಿ ಬಹಳಷ್ಟು ಪ್ರಭಾವ ಬೀರಿದವರು ಯಾರು ?

ನನ್ನನ್ನು ಬಹಳ ಪ್ರೀತಿಸುತ್ತಿದ್ದ ನನ್ನ ತಂದೆ -ತಾಯಿ ,ಅಜ್ಜಿ ,ನನ್ನ ಬಾಲ್ಯದ ಗುರು ಸಂಜೀವ ಹೆಗ್ಡೆಯವರ ಪ್ರೀತಿ ,ನಂತರದ ದಿನಗಳಲ್ಲಿ ನನಗೆ ಶಕ್ತಿ ತುಂಬಿದವಳು ಮಾವನ ಮಗಳಾದ ನನ್ನ ಧರ್ಮಪತ್ನಿ (ಶಕು  ಎಂದು ಕರೆಯುತ್ತಿದ್ದರು )ಶಕುಂತಲಾ . ನನ್ನ ಜೀವನದಲ್ಲಿ ಎಲ್ಲಕ್ಕಿಂತ ಹೆಚ್ಚು ಪ್ರಭಾವ ಅವಳದ್ದು .ಅವಳಿದ್ದಷ್ಟು ಕಾಲ ನನಗೆ ಯಾವುದೇ ಕೆಲಸದಲ್ಲೂ ಸದಾ ನನ್ನ ಹಿಂದಿದ್ದಳು . ಅದು ಹೋಟೆಲಿನ ಕೆಲಸದಲ್ಲಾಗಲೀ ಕಾನೂನಿನ ಯಾವುದೇ ಕೆಲಸದಲ್ಲಾಗಲೀ ನನಗಿಂತ ಮುಂದುವರಿದು ಕೆಲಸಮಾಡುತ್ತಾ ಹುರಿದುಂಬಿಸುತ್ತಿದ್ದಳು . ಸುಮ್ಮನೆ ಕಾನೂನಾತ್ಮಕ ವಾಗಿ ತೊಂದರೆ ಕೊಡುವ ಯಾವುದೇ ಸರ್ಕಾರಿ ಅಧಿಕಾರಿಯನ್ನೂ ತರಾಟೆಗೆ ತೆಗೆದುಕೊಳ್ಳುವಷ್ಟು ಜಾಣ್ಮೆ ಅವಳಲ್ಲಿತ್ತು . ತುಂಬಾ ಪ್ರತಿಭಾವಂತೆ ,ಧೈರ್ಯವಂತೆ .ಪರೋಪಕಾರ ಧರ್ಮದಲ್ಲೇ ಸಂತೃಪ್ತಿಯನ್ನು ಕಾಣುತ್ತಿದ್ದ ಅವಳನ್ನು ಬೇಗನೆ ಕಳೆದುಕೊಂಡ ನೋವು ಸದಾ ಕಾಡುತ್ತಿದೆ .

ನೀವು ಯಾವುದೇ ಪ್ರಚಾರಕ್ಕೆ ಆಸ್ಪದ ನೀಡದೆ ಸಮಾಜಸೇವೆಯನ್ನು ಜೀವನದ ಕರ್ತವ್ಯವೆಂಬಂತೆ ಮಾಡುತ್ತಿದ್ದೀರಿ . ಇದಕ್ಕೆಲ್ಲಾ ಪ್ರೇರಣೆ ಹೇಗೆ ಬಂತು ?

ನಾನು ಜೀವನದಲ್ಲಿ ಅನುಭವಿಸಿದ ,ಪಡಬಾರದ ಕಷ್ಟವೇ ನನಗೆ ಪ್ರೇರಣೆ ನೀಡಿತು . ಅಂತಹ ಕಷ್ಟ ಅನ್ಯರಿಗೆ ಬರಬಾರದೆನ್ನುವ ಉದ್ದೇಶದಿಂದ ನನ್ನಿಂದಾದ ನೆರವನ್ನು ನೀಡುತ್ತಾ ಬಂದಿದ್ದೇನೆ . ಇನ್ನೊಂದು ಮುಖ್ಯ ಕಾರಣವೆಂದರೆ ನನ್ನ  ಧರ್ಮಪತ್ನಿ . ಅವಳಿಗೆ ಯಾರೇ ಕಷ್ಟದಲ್ಲಿದ್ದರೂನೋಡಲಾಗುತ್ತಿರಲಿಲ್ಲ  . ಅವರ ನೆರವಿಗೆ ಸದಾ ಸ್ಪಂದಿಸುತ್ತಿದ್ದಳು . ಆ ಗುಣ ನನ್ನನ್ನೂ ಪ್ರೇರೇಪಿಸಿತು .ಬಡವರ ಶಿಕ್ಷಣಕ್ಕೆ ,ಅನಾರೋಗ್ಯ ಪೀಡಿತರಿಗೆ ,ದುಃಖಿತರಿಗೆ ಸದಾ ಸಹಾಯ ಮಾಡಬೇಕೆಂಬ ಹಂಬಲ ನನ್ನದು . ಪ್ರಚಾರಕ್ಕಾಗಿ ಫಲಾಪೇಕ್ಷೆ ಬಯಸಿ ಮಾಡಿದ ಸಮಾಜಸೇವೆಗೆ ಅರ್ಥವಿಲ್ಲ . ಯಾವಾಗಲೂ ನಾವು ಸಂಪಾದನೆಯ ಸ್ವಲ್ಪವನ್ನಾದರೂ ಕಷ್ಟದಲ್ಲಿರುವ ಜೀವನದಲ್ಲಿ ನೊಂದಿರುವ ಜನರಿಗಾಗಿ ವ್ಯಯ ಮಾಡಬೇಕಾಗಿದೆ .

ನೀವು ಹೋಟೆಲ್ ಉದ್ಯಮದಲ್ಲಿ ಇಷ್ಟೊಂದು ಯಶಸ್ಸನ್ನು ಗಳಿಸಿದ್ದೀರಿ .  ಯಶಸ್ಸಿಗೆ ದೇವರ ದಯೆಯೇ ಕಾರಣವೆನ್ನುತ್ತೀರಾ ಅಥವಾ ನಿಮ್ಮ ಪರಿಶ್ರಮದ ಫಲವೆನ್ನುತ್ತೀರಾ ?

ಯಾವ ಮನುಷ್ಯ ಕಠಿಣ ಪರಿಶ್ರಮದೊಂದಿಗೆ ತನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ಶ್ರದ್ಧೆಯಿಂದ ಮಾಡುತ್ತಾನೋ ಅವನಿಗೆ ದೇವರ ಆಶೀರ್ವಾದ ದೊರಕುವುದರಲ್ಲಿ ಸಂದೇಹವಿಲ್ಲ . ಇದೇ ದೇವರ ಪೂಜೆ .ಅದು ಬಿಟ್ಟು ಕಷ್ಟಪಡದೆ ದೇವರು ನೀಡುತ್ತಾನೆ ಎಂದು ಕೂತರೆ ಯಾವ ದೇವರು ತಾನೇ ಕೊಡಲು ಸಾಧ್ಯ ? ಜೀವನದಲ್ಲಿ ಕರ್ತವ್ಯನಿಷ್ಠೆ ,ಪ್ರಾಮಾಣಿಕತೆ ಆತ್ಮವಿಶ್ವಾಸದೊಂದಿಗೆ ಸಾಧಿಸುವ ಛಲ ನಮ್ಮಲ್ಲಿದ್ದರೆ ಜೀವನದಲ್ಲಿ  ಏನನ್ನಾದರೂ ಸಾಧನೆ ಮಾಡಲು ಸಾಧ್ಯವಿದೆ . ನನಗೆ ಕರ್ಮಸಿದ್ಧಾಂತದ ಮೇಲೆ ಆಳವಾದ ನಂಬಿಕೆ . ಇದನ್ನು ನಿಷ್ಠೆಯಿಂದ ಮಾಡಿದರೆ ಭಗವಂತ ಖಂಡಿತವಾಗಿಯೂ ಆಶೀರ್ವದಿಸುತ್ತಾನೆ .

ನಿಮಗೆ ಪುಣೆಯಲ್ಲಿ ಸಂಘಸಂಸ್ಥೆಗಳ ಒಲವು ಹೇಗೆ ಬಂತು ?

ನನ್ನ ಆಪ್ತ ಮಿತ್ರರಾದ ದಿ . ಗುಂಡೂರಾಜ್ ಶೆಟ್ಟಿ ,ಶ್ಯಾಮರಾವ್ ಕಲ್ಮಾಡಿ ಹಾಗೂ ನಾಲ್ಕೈದು ಜನರು ಸೇರಿಕೊಂಡು ಮೊದಲಿಗೆ ಪುಣೆಯಲ್ಲಿ ಕನ್ನಡ ಸಂಘವನ್ನು ಸ್ಥಾಪಿಸಿದೆವು . ನಂತರದ ದಿನಗಳಲ್ಲಿ ಬಂಟರ ಸಂಘದೊಂದಿಗೂ ಒಲವು ಹರಿಯಿತು .ಇಲ್ಲಿರುವ ನಮ್ಮವರನ್ನೆಲ್ಲ ಸಾಮಾಜಿಕವಾಗಿ ,ಸಾಂಸ್ಕೃತಿಕವಾಗಿ ಒಗ್ಗೂಡಿಸಲು ಸೇವಾ ಮನೋಭಾವನೆಯೊಂದಿಗೆ ಸಂಘವನ್ನು ಸ್ಥಾಪಿಸಲು ಮುಂದಾದೆವು .ನಾವು ವೈಯಕ್ತಿಕವಾಗಿ ಬೆಳೆಯುವುದಕ್ಕಿಂತ ಸಂಘಜೀವಿಯಾಗಿ ಬೆಳೆಯಲು ಒಲಿವಿರಬೇಕಾಗಿದೆ . ಹೊರನಾಡಿನಲ್ಲಿದ್ದುಕೊಂಡು ಇಲ್ಲಿ ನಮ್ಮವರನ್ನು ಕಾಣುವಾಗ ಪ್ರೀತಿ ಹೆಚ್ಚು .ಅದೇ ರೀತಿ ನಮ್ಮ ತುಳುನಾಡಿನ ಸಂಸ್ಕೃತಿ ಆಚಾರ ,ವಿಚಾರ ,ಕಲೆ ,ದೈವದೇವರ ಮೇಲಿನ ನಂಬಿಕೆಗಳು  ಎಲ್ಲವೂ ತುಳುನಾಡಿನ ಮಣ್ಣಿನ ಸೊಗಡನ್ನು ಪರಿಚಯಿಸುತ್ತದೆ .ಇವುಗಳ ಬಗ್ಗೆ ಪ್ರೀತಿ ,ಅಭಿಮಾನ ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕಾಗಿದೆ . ನಾವು ಎಲ್ಲೇ ನೆಲೆಸಿದ್ದರೂ  ಅದೆಲ್ಲವನ್ನೂ ನಾವು ಅನುಸಂಧಾನ ಮಾಡಿಕೊಂಡು ಜೀವಿಸಬೇಕಾಗಿದೆ . ಅದರಲ್ಲಿ ಸಿಗುವ ಆತ್ಮತೃಪ್ತಿಯೇ ಬೇರೆ . ಅದರಂತೆ ನಾವು ಈ ಮರಾಠಿ ಮಣ್ಣಿನಲ್ಲಿದ್ದುಕೊಂಡು ಅನ್ನ ನೀಡಿದ ಈ ಮಣ್ಣಿನ ಸಂಸ್ಕೃತಿಯನ್ನೂ ಗೌರವಿಸಬೇಕಾಗಿದೆ .

ನಿಜವಾದ ಸಮಾಜಸೇವೆ  ಹಾಗೂ ಪುಣೆಯ ಸಂಘ ಸಂಸ್ಥೆಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು ?

ಸಮಾಜಸೇವೆ ಎಂದರೆ ನಿಸ್ವಾರ್ಥದಿಂದಿರಬೇಕು . ಯಾರಿಗಾದರೂ ಸಹಾಯ ಮಾಡಬೇಕೆಂದರೆ ಅದು ಸೇವಾ  ಮನೋಭಾವದೊಂದಿಗೆ ನಿಷ್ಕಲ್ಮಶ ಮನಸ್ಸಿನಿಂದ ನೀಡಬೇಕು . ಬಲಗೈಯ್ಯಲ್ಲಿ ನೀಡಿದರೆ ಎಡಗೈಗೆ  ತಿಳಿಯದಂತಿರಬೇಕು . ಪ್ರಚಾರಕ್ಕಾಗಿ ಸಮಾಜಸೇವೆ ಮಾಡುವುದು ಕ್ಷೇಮವಲ್ಲ . ಸಂಘ ಸಂಸ್ಥೆಗಳಿಗೆ ಒಂದು ಉತ್ತಮವಾದ ಧ್ಯೇಯ ಇರಬೇಕಾಗಿದೆ . ಅಶಕ್ತರಿಗೆ ,ಮಕ್ಕಳ ಶಿಕ್ಷಣಕ್ಕೆ ,ಅನಾರೋಗ್ಯಪೀಡಿತರಿಗೆ ನಿಸ್ವಾರ್ಥಭಾವದಿಂದ ನೆರವಾಗುವಂತಿರಬೇಕು . ಆದರೆ ಇಂದು ನಮ್ಮ ಸಂಘಸಂಸ್ಥೆಗಳು ಸ್ಥಾನಮಾನ ಹಾಗೂ ಪ್ರಚಾರಕ್ಕಾಗಿ ಮಾಡುವ ಕಾರ್ಯಗಳೇ ಹೆಚ್ಚು . ಇಂದಿನ ದಿನಗಳಲ್ಲಿ ಸಂಘ ಸಂಸ್ಥೆಗಳು ಶೇಕಡಾ ೫೦-೫೦ ಅನುಪಾತದಲ್ಲಿ ಸಮಾಜಸೇವೆ ಹಾಗೂ ಪ್ರಚಾರದ ದೃಷ್ಟಿಕೋನದಲ್ಲಿ ಕಾಣಬಹುದಾಗಿದೆ . ಸಂಘಟನೆಯೊಂದಿಗೆ ಎಲ್ಲರೂ  ಸಮಾನರಾಗಿ ಗುರುತಿಸಿಕೊಳ್ಳುವಂತೆ ನಡೆದುಕೊಳ್ಳಬೇಕಾಗಿದೆ . ಇಲ್ಲಿ ಮೇಲು ಕೀಳು ,ಬಡವ- ಬಲ್ಲಿದನೆನ್ನುವ ತಾರತಮ್ಯ ಇರಬಾರದು . ಸಂಘವೆಂದರೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕಷ್ಟಸುಖಗಳಲ್ಲಿ ಸ್ಪಂದಿಸುವ ಕಾರ್ಯ ಆಗಬೇಕಾಗಿದೆ . ಇಲ್ಲಿ ಸ್ವಾರ್ಥದ ಮಾತು ಬರಬಾರದು . ಪುಣೆಯಲ್ಲಿ ನಮ್ಮವರ ಹಲವಾರು ಸಂಘಸಂಸ್ಥೆಗಳು ಕಾರ್ಯವೆಸಗುತ್ತಿರುವುದು ಉತ್ತಮ ವಿಚಾರವಾಗಿದೆ . ಇದರಿಂದಾಗಿ ನಮ್ಮ ಮಕ್ಕಳಿಗೂ  ವೇದಿಕೆ ಒದಗಿಸಿದಂತಾಗುತ್ತದೆ . ನಮ್ಮ ಮಕ್ಕಳನ್ನು ಪ್ರೋತ್ಸಾಹಿಸುವ ಕಾರ್ಯ ಆಗಬೇಕಾಗಿದೆ .ಎಲ್ಲಕ್ಕಿಂತ ಮುಖ್ಯವಾಗಿ  ಸಂಘದ ಧ್ಯೇಯೋದ್ದೇಶಗಳನ್ನು ಅರಿತುಕೊಂಡು ಪರೋಪಕಾರ ಚಿಂತನೆ ,ಸಾಮಾಜಿಕ ಬದ್ಧತೆಯನ್ನು ರೂಢಿಸಿಕೊಂಡಾಗ ಮಾತ್ರ ಸಂಘ ಸಂಸ್ಥೆಗಳು ಅರ್ಥವನ್ನು ಪಡೆದುಕೊಂಡು ಸಾರ್ಥಕವಾಗುತ್ತದೆ .

ನೀವು ಯಾವಾಗಲೂ ಮುಖದಲ್ಲಿ ಮಂದಹಾಸದೊಂದಿಗೆ ಉತ್ಸಾಹದಿಂದ ಕಂಡುಬರುತ್ತೀರಿ ಇದರ ಗುಟ್ಟೇನು ?

ಅನ್ಯರ ಕಷ್ಟಸುಖಗಳಲ್ಲಿ ಭಾಗಿಯಾಗಿ ಸಂಘಜೀವಿಯಾಗಿ ಬಾಳುವುದರಿಂದ ಜೀವನದಲ್ಲಿ ಆನಂದ ಹೆಚ್ಚು . ನಮ್ಮೊಳಗಿನ ಹೃದಯದ ಆನಂದವೇ ಮನಸ್ಸಿನ ಆನಂದ . ನಾನು ಕಳೆದ ೩೦ ವರ್ಷಗಳಿಂದ ದಿನನಿತ್ಯ ಪ್ರಾತಕಾಲದಲ್ಲಿ ಒಂದು ಗಂಟೆಯ ಧ್ಯಾನವನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದೇನೆ . ಇದು ಇಡೀ ದಿನಕ್ಕೆ ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ . ನಮ್ಮ ದೈನಂದಿನ ಕೆಲಸಕಾರ್ಯಗಳಲ್ಲಿ ಸ್ವಲ್ಪ ಸಮಯವನ್ನು ಯೋಗ ,ಧ್ಯಾನಗಳಿಗೆ ನೀಡಿದರೆ ಆರೋಗ್ಯ ಹಾಗೂ ಮನಸ್ಸು ಉತ್ತಮವಾಗಿರುತ್ತದೆ . ಇಂದಿನ ಧಾವಂತದ ಬದುಕಿನಲ್ಲಿ ಮಾನವ ಮಾನವೀಯತೆಯನ್ನು ಬೆಳೆಸಿಕೊಳ್ಳುವುದು ಎಲ್ಲಕ್ಕಿಂತ ಮುಖ್ಯವಾಗಿದೆ . ಇದರಿಂದ ಮಾನಸಿಕ ನೆಮ್ಮದಿ ನಮ್ಮದಾಗುತ್ತದೆ .

ಕೊನೆಯದಾಗಿ ಇಂದಿನ ಯುವ ಜನತೆಗೆ ಯಾವ ಸಂದೇಶವನ್ನು ನೀಡಬಯಸುತ್ತೀರಿ ?

ನಾವು ಜೀವನದಲ್ಲಿ ಪ್ರಾಮಾಣಿಕವಾಗಿ ನಮ್ಮ ನಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸಬೇಕು .ಬರುವಂತಹ  ಹೊಸ ಹೊಸ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು . ನಮ್ಮ ನಾಡು ,ನುಡಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯಗಳನ್ನು ಮಾಡಬೇಕು . ಪರೋಪಕಾರ ಮನೋಭಾವನೆಯನ್ನು ರೂಢಿಸಿಕೊಳ್ಳಬೇಕು .  ಹಿಂದಿನ ಕಾಲದಲ್ಲಿ ತಂದೆ- ತಾಯಿಗಳಿಗೆ, ಗುರುಹಿರಿಯರಿಗೆ ವಿಧೇಯರಾಗಿ ದೈವದೇವರಲ್ಲಿ ಭಕ್ತಿ ಯೊಂದಿಗೆ ಸುಸಂಸ್ಕೃತರಾಗಿ ನಾವು ಜೀವಿಸಿದ್ದೆವು .ಅದು ನಮ್ಮ ಹಿರಿಯರ ಕಾಲದಿನದಲೂ ಬಂದ ಬಳುವಳಿಯಾಗಿತ್ತು .  ಅದು ಜೀವನದುದ್ದಕ್ಕೂ ನಮಗೆ ಉತ್ತಮ ಪಾಠವಾಗಿತ್ತು . ಆದರೆ ಇಂದಿನ ಮಕ್ಕಳು ಆಧುನೀಕರಣದ ಸೋಗಲಾಡಿತನದೊಂದಿಗೆ ಪ್ಯಾಶನ್ ಯುಗದಲ್ಲಿ ಜೀವಿಸುತ್ತಿದ್ದು ನಮ್ಮತನವನ್ನು ಮರೆತು ಜೀವಿಸುತ್ತಿರುವುದು ದುರಂತವಾಗಿದೆ . ಬಾಲ್ಯದಿಂದಲೇ ವಿದ್ಯೆಯೊಂದಿಗೆ ಜೀವನವನ್ನು ಸಂಸ್ಕಾರವಂತರಾಗಿ ಬದುಕುವ ಕಲೆಯನ್ನು ನಾವು ತಿಳಿಸುವ ಅಗತ್ಯತೆಯಿದೆ .ನಾವು ನಮ್ಮ ಮಕ್ಕಳಿಗೆ ಮನೆಯಲ್ಲಿ ನಮ್ಮ ತುಳು ಭಾಷೆಯನ್ನು ,ನಮ್ಮ ಮಣ್ಣಿನ ಸಂಸ್ಕೃತಿಯ ವಿಚಾರಗಳನ್ನು ಅಗತ್ಯವಾಗಿ ಕಲಿಸಬೇಕಾಗಿದೆ . ಇದರಿಂದಾಗಿ ಭವಿಷ್ಯದಲ್ಲಿ  ನಮ್ಮ ಸಂಸ್ಕೃತಿ ,ಭಾಷೆ ಉಳಿಯಲು ಸಾಧ್ಯವಿದೆ .

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ